ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಫೌಝಿಯಾ ಸಲೀಂರವರ ಹುಟ್ಟೂರು ಮಂಗಳೂರು. ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು, ಮಂಗಳೂರಿನ ಕಾಲೇಜು ಒಂದರಲ್ಲಿ ನಾಲ್ಕು ವರ್ಷಗಳ ಕಾಲ ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಇವರು ದುಬೈನಲ್ಲಿ ವಾಸಿಸುತ್ತಿದ್ದು, ದುಬೈಯಲ್ಲಿರುವ ಕಂಪನಿಯೊಂದರ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಯುವ ಓದುಗರಿಗೆ ಇಷ್ಟವಾಗಬಹುದಾದ ಬರಹಗಳನ್ನು ಬರೆಯುವ ಫೌಝಿಯರವರು, “ಮನಸ್ಸಾರೆ” ಹಾಗು “ನಿನ್ನನ್ನೇ ಪ್ರೀತಿಸುವೆ" ಎಂಬ ಎರಡು ಕಿರುಕಾದಂಬರಿಗಳ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿಟ್ಟರು. 2022ರಲ್ಲಿ ಪ್ರಕಟವಾದ ಇವರ “ಬಾಳ ಪಯಣ” ಕಾದಂಬರಿಯು, ಜಾಗತಿಕ ಮಟ್ಟದಲ್ಲಿರುವ ಅಂತಾರಾಷ್ಟ್ರೀಯ ಬೃಹತ್ ಗ್ರಂಥಾಲಯವಾದ ದುಬೈಯ ಮುಹಮ್ಮದ್ ಬಿನ್ ರಾಶಿದ್ ಲೈಬ್ರರಿಯಲ್ಲಿ ಸ್ಥಾನ ಪಡೆದಿದೆ.
ತಮ್ಮ ಬಿಡುವಿನ ಸಮಯದಲ್ಲಿ ಸಣ್ಣ ಕಥೆಗಳು, ಕವನಗಳು, ನುಡಿಮುತ್ತುಗಳನ್ನು ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಇವರು 'ಅರೇಬಿಯನ್ ಮೀಲ್' ಮಲಯಾಳಂ ಯುಟ್ಯೂಬ್ ಚಾನೆಲ್ ಒಂದರಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ.