ಲೇಖಕ, ಪತ್ರಕರ್ತ ದೊಡ್ಡಹುಲ್ಲೂರು ರುಕ್ಕೋಜಿರಾವ್ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ದೊಡ್ಡ ಹುಲ್ಲೂರಿನಲ್ಲಿ 1958ರಲ್ಲಿ ಜನಿಸಿದರು. ರಂಗಭೂಮಿ, ಚಲನಚಿತ್ರ ಮತ್ತು ಬರವಣಿಗೆ ಅವರ ಆಸಕ್ತಿಯ ಕ್ಷೇತ್ರಗಳು. ಹಲವಾರು ಚಲನಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. ‘ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು-೧, ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು-೨’ ಅವರ ಪ್ರಮುಖ ಕೃತಿಗಳು. ಡಾ. ರಾಜಕುಮಾರ್ ಸಮಗ್ರ ಜೀವನಚರಿತ್ರೆಯನ್ನು ಅಭೂತಪೂರ್ವವಾಗಿ ಚಿತ್ರ ಸಹಿತ ರಚಿಸಿ ಎರಡು ಮಹಾ ಸಂಪುಟಗಳಲ್ಲಿ ಹೊರತಂದಿದ್ದು ಕನ್ನಡ ಸಾಹಿತ್ಯರಂಗದಲ್ಲಿ ಇದೊಂದು ದೊಡ್ಡ ದಾಖಲೆ. ರಾಜ್‌ಕುಮಾರ್ ಅವರ ಸಮಗ್ರ ಜೀವನವನ್ನು ಕಟ್ಟಿಕೊಡುವ `ರಾಜ್‌ಕುಮಾರ್ ಸಮಗ್ರ ಚರಿತ್ರೆ ಸಂಪುಟ-1, ಸಂಪುಟ-2’ ಈ ಕೃತಿಗಳನ್ನು ರುಕ್ಕೋಜಿ ಅವರು ತಮ್ಮ 15 ವರ್ಷಗಳ ಪರಿಶ್ರಮದಿಂದ ಸುಮಾರು 87 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಇದು ಅವರ ಅದಮ್ಯ ಸಾಧನೆ. 2,140 ಪುಟಗಳ ಬೃಹತ್ ಪುಸ್ತಕದಲ್ಲಿ ರಾಜ್‌ಕುಮಾರ್ ಅವರ ಜೀವನ ಚರಿತ್ರೆಯೊಂದಿಗೆ ಅಪರೂಪದ ಛಾಯಾಚಿತ್ರಗಳು (8310 - ಎರಡು ಸಂಪುಟಗಳಿಂದ) ಒಳಗೊಂಡಿರುವುದು ಮತ್ತೊಂದು ಹೆಗ್ಗಳಿಕೆ. ಈ ಕೃತಿಗೆ 63ನೇ ರಾಷ್ಟ್ರೀಯ ಸ್ವರ್ಣಕಮಲ ಪ್ರಶಸ್ತಿ ಲಭಿಸಿದೆ. ದೇಶದ ಚಲನಚಿತ್ರ ಇತಿಹಾಸದಲ್ಲಿ ಯಾವುದೇ ನಟನ ಜೀವನ ಚಿತ್ರಣವನ್ನು ಈ ಬಗೆಯ ವಿನ್ಯಾಸದಲ್ಲಿ, ವಿನೂತನವಾಗಿ ಪ್ರಕಟಗೊಂಡಿಲ್ಲ.