ಸಾಹಿತ್ಯ , ಶಿಕ್ಷಣ, ರಂಗಭೂಮಿ, ಸಂಗೀತ ಮತ್ತು ಪರಿಸರ ಕ್ಷೇತ್ರಗಳಲ್ಲಿ ತಮ್ಮದೇ ಕಾಣ್ಕೆ ನೀಡಿರುವ ವಿಶಿಷ್ಟ ಪ್ರತಿಭೆ ದೇಶಾಂಶ ಹುಡಗಿ. ಶಿಕ್ಷಕ, ಲೇಖಕ, ರಂಗಕಲಾವಿದ, ನಿರ್ದೇಶಕ, ಅನುವಾದಕ, ಗಾಯಕರಾಗಿ ಅವರದ್ದು ಬಹುಮುಖಿ ಸಾಧನೆ. ದೇಶಾಂಶ ಹುಡಗಿ ಕಾವ್ಯನಾಮದ ಶಾಂಪಪ್ಪ ಶರಣಪ್ಪ ದೇವರಾಯ ಅವರು ಗಡಿನಾಡಿನ ಪ್ರತಿಭೆ. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹುಡಗಿ ಹುಟ್ಟೂರು.1936 ನವೆಂಬರ್ 6 ರಂದು ಜನಿಸಿದ ಅವರು ಸ್ವಗ್ರಾಮದಲ್ಲಿ ಪ್ರಾಥಮಿಕ, ಚಿಟಗುಪ್ಪದಲ್ಲಿ ಮಾಧ್ಯಮಿಕ, ಗುಲ್ಬರ್ಗಾದ ಸರ್ಕಾರಿ ಹೈಸ್ಕೂಲಿನಲ್ಲಿ ಪ್ರೌಢಶಾಲೆ, ಹೈದರಾಬಾದ್ ನ ವಿವೇಕವರ್ಧಿನಿ ವಿದ್ಯಾಲಯದಲ್ಲಿ ಕಾಲೇಜು ಶಿಕ್ಷಣ. ಬಾಹ್ಯ ವಿದ್ಯಾರ್ಥಿಯಾಗಿ ಮಧ್ಯಪ್ರದೇಶ ಇಂಟರ್ ಮೀಡಿಯೇಟ್, ಕರ್ನಾಟಕ ವಿವಿಯಲ್ಲಿ ಬಿ.ಎ.ಪದವಿ, ಕಲಬುರ್ಗಿ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ ವ್ಯಾಸಂಗ ಮಾಡಿದ್ದಾರೆ.
1954ರಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಸಹಾಯಕ ಶಿಕ್ಷಕ, ಮುಖ್ಯಾಧ್ಯಪಕ, ಕನ್ನಡ ಪಂಡಿತ, ಪ್ರೌಢಶಾಲಾ ಸಹಶಿಕ್ಷಕನಾಗಿ ಶೈಕ್ಷಣಿಕ ಸೇವೆ ಸಲ್ಲಿಸಿದ್ದಾರೆ. ಉರ್ದು, ಮರಾಠಿ, ಹಿಂದಿ ಭಾಷೆಯಲ್ಲಿ ಪ್ರಭುತ್ವ, ಸಾಹಿತ್ಯ ರಚನೆ ಜಾನಪದ ಹಾಡುಗಾರಿಕೆ, ಕೊಳಲುವಾದನ, ರಂಗನಟನೆ, ನಿರ್ದೇಶನ ಮತ್ತು ಪರಿಸರ ರಕ್ಷಣೆ ನೆಚ್ಚಿನ ಹವ್ಯಾಸ. ಹಂತಿಹಾಡು. ಗೀಗೀಪದ, ಜೋಗುಳ, ತತ್ವಪದ, ಕೋಲಿನಪದ ಮೊಹರಂ ಪದ, ಸೀಗಿಹಾಡು ಮತ್ತು ಹೋಳಿಹಾಡಿನ ಸಮ್ಮೋಹಕ ಗಾಯಕರು. 25ಕ್ಕೂ ಹೆಚ್ಚು ನಾಟಕಗಳಲ್ಲಿ ನಗೆಚಿಮ್ಮಿಸಿದ ಹಾಸ್ಯನಟರು. 20 ನಾಟಕಗಳನ್ನು ನಿರ್ದೇಶಿಸಿರುವ ದೇಶಾಂಶ ಹುಡಗಿಯವರು ಸಂಪಾದಕ, ಅಂಕಣಕಾರರಾಗಿ ಪತ್ರಿಕಾರಂಗದಲ್ಲೂ ಸೇವೆ ಸಲ್ಲಿಸಿದ್ದಾರೆ. ಹನಿಗವನ, ಚೌಪದಿ ಕಾವ್ಯ, ಗ್ರಂಥಸಂಪಾದನೆ, ಅನುವಾದ, ಕಾವ್ಯ, ವ್ಯಕ್ತಿಚಿತ್ರಗಳು, ಆಧುನಿಕ ವಚನಗಳು, ಕಥನ ಕವನಗಳು, ಇತಿಹಾಸ ಮತ್ತಿತರ ಸಾಹಿತ್ಯದ ಪ್ರಕಾರಗಳಲ್ಲಿ ಒಟ್ಟು 50ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಸಾವಿರಕ್ಕೂ ಅಧಿಕ ಆಧುನಿಕ ವಚನಗಳ ಲೇಖಕರು. ಹತ್ತಾರು ಸಾಹಿತ್ಯಿಕ ಸಮ್ಮೇಳನಗಳು, ಕಾರ್ಯಾಗಾರಗಳಲ್ಲಿ ಸಕ್ರಿಯ ಭಾಗವಹಿಸುವಿಕೆ. ಧರಿನಾಡು ಕನ್ನಡ ಸಂಘದ ಕೇಂದ್ರ ಸಮಿತಿಯ ಬೀದರ್ ಘಟಕದ ಅಧ್ಯಕ್ಷರಾಗಿಯೂ ನೂರಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದ ಧನ್ಯತೆ. ಶರಣ ಸಾಹಿತ್ಯ ಪ್ರಕಾರದಲ್ಲಿ ಅವಿರತ ಶ್ರಮ. ಬಹುಶ್ರುತ ಸೇವೆಗೆ ಅನುಭವಶ್ರೀ, ಕಾಯಕ ಸಮ್ಮಾನ, ಸುವರ್ಣ ಕನ್ನಡಿಗ, ಕಲ್ಯಾಣ ರತ್ನ, ಜಾನಪದ ತಜ್ಞ, ಕರುನಾಡು ಸಿರಿ ಮುಂತಾದ ಗೌರವ, ಸಮ್ಮಾನಗಳಿಗೆ ಪಾತ್ರರು.