ಲೇಖಕ ಚಂದ್ರು ಓಬಯ್ಯ ಅವರ ಪೂರ್ಣ ಹೆಸರು ಚಂದ್ರಶೇಖರ್ ಓಬಯ್ಯ. ಹುಟ್ಟಿದ್ದು ತುಮಕೂರು ಜಿಲ್ಲೆ ಪಾವಗಡ ತಾಲೂಕು ಕೆಂಚಮ್ಮನಹಳ್ಳಿಯ ಗೊಲ್ಲರಹಟ್ಟಿಯಲ್ಲಿ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನ ತನ್ನೂರಿನ ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿ, ಶಿಕ್ಷಕ ತರಬೇತಿ ಶಿಕ್ಷಣವನ್ನ ಬೆಂಗಳೂರಿನ ಕೆಂಗೇರಿ ಬಳಿ ಇರುವ ಬಂಡೆ ಮಠದ ಸಂಸ್ಥೆಯಲ್ಲಿ ಪಡೆಯುತ್ತಾರೆ. ಸಂಗೀತದ ಮೇಲೆ ಅಪಾರ ಪ್ರೀತಿ ಇದ್ದ ಕಾರಣ ಆ ಕ್ಷೇತ್ರದಲ್ಲಿ ಏನಾದರೊಂದು ಸಾಧಿಸಬೇಕು ಎನ್ನುವ ಛಲ ಇವರಲ್ಲಿರುತ್ತದೆ. ಇವರ ತಂದೆ ನಾಟಕ ಹೇಳಿಕೊಡುವ ಸಂಗೀತ ಶಿಕ್ಷಕರಾಗಿದ್ದ ಕಾರಣ ಸಂಗೀತ ಇವರಿಗೆ ರಕ್ತಗತವಾಗೇ ಬಂದಿತ್ತು. ಅಷ್ಟೇಅಲ್ಲದೆ ಕವನಗಳನ್ನ ಬರೆಯಲು ಪ್ರಾರಂಭಿಸುತ್ತಾರೆ. ತದ ನಂತರ ಎರಡು ಸಾವರದ ಹನ್ನೆರೆಡರಲ್ಲಿ "ಆಲೋಚನೆ" ಎಂಬ ಸಣ್ಣ ಕಥೆಗಳ ಪುಸ್ತಕವ ಬರೆದು ಬಿಡುಗಡೆಗೊಳಿಸುತ್ತಾರೆ. ನಂತರ ಎರೆಡು ಸಾವಿರದ ಹದಿನಾಲ್ಕರಲ್ಲಿ "ಪವಿತ್ರೆ” ಕಾದಂಬರಿ, ಎರೆಡುಸಾವಿರ ಇಪ್ಪತರಲ್ಲಿ " ಅಮೇರಿಕದಲ್ಲಿ ನಾಣು" ಮತ್ತು ಎರೆಡುವಿರದ ಇಪ್ಪತ್ತೆರಡರಲ್ಲಿ “ರಾಮ ಮತ್ತು ರಾಮು" ಕಾದಂಬರಿಗಳು ಬಿಡುಗಡೆಗೊಳ್ಳುತ್ತವೆ. ಲೇಖಕರು ಸಾಹಿತ್ಯದ ಜೊತೆಗೆ ಕನ್ನಡ ಚಿತ್ರರಂಗಲ್ಲೂ ಕಾರ್ಯಪ್ರವೃತ್ತರಾಗಿ ಹತ್ತು ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸಮಾಡಿದ್ದಾರೆ. ಇದಲ್ಲದೆ ನಿರ್ದೇಶಕರಾಗಿ, ಗಾಯಕರಾಗಿ ಮತ್ತು ನಿರ್ಮಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇವರು ನಿರ್ದೇಶಕರಾಗಿ ಮತ್ತು ನಟರಾಗಿ ಮಾಡಿದ "ಯೂ ಟರ್ನ್ 2” ಚಿತ್ರ ಕನ್ನಡ ಚಿತ್ರರಂಗಲ್ಲಿ ಯಶಸ್ಸನ್ನು ಕಂಡಿದೆ.