ಸಾಹಿತಿ, ಹೊಸಗನ್ನಡ ಭಾಷಾ ಸಾಹಿತ್ಯದಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ವಾಸುದೇವಯ್ಯನವರು 1852 ಆಗಸ್ಟ್ 02 ರಂದು ಚನ್ನಪಟ್ಟಣದಲ್ಲಿ ಜನಿಸಿದರು. ಸೆಂಟ್ರಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಇವರು ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ವಿದ್ಯಾ ಇಲಾಖೆಯ ಇನ್‌ಸ್ಪೆಕ್ಟರ್ ಜೆನರಲ್ ಕಚೇರಿಯಲ್ಲಿ ಗುಮಾಸ್ತರಾಗಿ, ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾದರು.
ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದ ಇವರು ಮಕ್ಕಳಿಗಾಗಿ ಕೃತಿ ರಚನೆಯಲ್ಲಿ ತೊಡಗಿಕೊಂಡಿದ್ದರು. ಬಂಗಾಳಿ ಭಾಷೆಯ ರಾಜಪುತ್ರ ಮಹಿಮೆ ಕೃತಿಯನ್ನು ಆರ್ಯಕೀರ್ತಿ ಭಾಗ-೧ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದರು. ಆರ್ಯಕೀರ್ತಿ ಭಾಗ-೨, ಭೀಷ್ಮನ ಸತ್ಯ ಪ್ರತಿಜ್ಞೆ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದರು. ಇವರು 1943 ಡಿಸೆಂಬರ್ 26 ರಂದು ನಿಧನರಾದರು.