ಕವಿ ಬುದ್ದಣ್ಣ ಹಿಂಗಮಿರೆ ಅವರು 1933 ಸೆಪ್ಟೆಂಬರ್ 4ರಂದು ಕೊಲ್ಹಾಪುರ ಜಿಲ್ಲೆಯ ರಾಜಾಪುರದಲ್ಲಿ ಜನಿಸಿದರು. ತಂದೆ ಬಾಬು, ತಾಯಿ ದುಂಡವ್ವ. ಬೆಳಗಾವಿಯ ಲಿಂಗರಾಜ ಕಾಲೇಜಿನಿಂದ ಬಿ.ಎ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ರಷ್ಯನ್ ಭಾಷೆಯಲ್ಲಿ ಎಂ.ಎ ಪದವಿ, ಪುಣೆ ವಿಶ್ವವಿದ್ಯಾಲಯದಿಂದ ಎಂ.ಎ ಹಾಗೂ ಪಿಎಚ್.ಡಿ. (ವಿಷಯ: ಕನ್ನಡದಲ್ಲಿ ಶೋಕ ಕಾವ್ಯ) ಪಡೆದರು.
ಅಥಣಿಯಲ್ಲಿ ಹೈಸ್ಕೂಲ್ ಶಿಕ್ಷಕರಾಗಿ, ನಿಪ್ಪಾಣಿಯ ಜಿ.ಐ. ಬಾಗೇವಾಡಿ ಕಾಲೇಜಿನಲ್ಲಿ ಹಾಗೂ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಮತ್ತು ಧಾರವಾಡದ ಕರ್ನಾಟಕ ಕಲಾ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ.
ಕೃತಿಗಳು: ಹುಲ್ಲುಗೆಜ್ಜೆ, ಶಬ್ದ ರಕ್ತ ಮತ್ತು ಮಾಂಸ, ಹದ್ದುಗಳ ಹಾಡು, ತೀರ್ಪು, ನೀಲಾಂಜನೆ, ಅಹಲ್ಯೆ, ಈ ನದಿಯ ಮಡಿಲಲ್ಲಿ, ಬುದ್ಧ ಕಾವ್ಯ ದರ್ಶನ, ಹೊಸ ಜನಾಂಗದ ಕವಿತೆಗಳು ಇವರ ಪ್ರಮುಖ ಕೃತಿಗಳು.
ರಷ್ಯನ್ ಕಾವ್ಯದ ಅನುವಾದ-ರೂಪಾಂತರಗಳು: ರಷ್ಯನ್ ಹೊಸ ಕವಿತೆಗಳು, ತರಾಸ್ ಷೆವ್ ಚಿಂಕೊ ಕವಿತೆಗಳು, ಅವೆತಿಕ್ ಇಸ್ಸಾಕ್ಯಾನ್ ಕಾವ್ಯ, ಪುಷ್ಠಿನ್ ಕವಿತೆಗಳು, ಬೈಲೊರಷ್ಯನ್ ಕವಿತೆಗಳು, ಕೊಬ್ಜಾರ: ಹಾಡುಗಾರ ತರಾಸ್ ಷೆವ್ ಚೆಂಕೊ, ಅಫನಾಸಿ ನಿಕಿತನ್ ಕಂಡ ಕರ್ನಾಟಕ (ರಷಿಯಾದ ಪ್ರವಾಸಿ),, ಕಾವ್ಯ ಸಂಕಲನಗಳು: ಉದಯರಾಗ, ಗುಬ್ಬಿಯ ಹಾಡು, ಬಾಪೂ ಬೆಳಕು, ಹೊಸ ಜನಾಂಗದ ಕವಿತೆಗಳು, ಬಂಧಮುಕ್ತ ಬಾಂಗ್ಲಾ, ಮುತ್ತು-ಹವಳ, ಇಳಿದು ಬಾ ತಾಯಿ (ದ.ರಾ.ಬೇಂದ್ರೆ ಅಭಿನಂದನಾ ಗ್ರಂಥ), ಕರ್ಕಿಯವರ ಆಯ್ದ ಕವಿತೆಗಳೂ, ಕಾವ್ಯ ಗೌರವ, ಜಾಗತಿಕ ಕಾವ್ಯ ಸಂಕಲನ,
ವಿಮರ್ಶೆ ಸಂಕಲನಗಳು: ಕನ್ನಡದಲ್ಲಿ ಶೋಕ ಕಾವ್ಯ (ಪಿಎಚ್ ಡಿ ಪ್ರಬಂಧ), ಹೊಸ ಕಾವ್ಯ ಹೊಸ ದಿಕ್ಕು (ಕನ್ನಡದಲ್ಲಿ ನವ್ಯ ಕಾವ್ಯ ವಿಮರ್ಶೆ), ಕನ್ನಡ ನವ್ಯ ಕಾವ್ಯ ಭೂಮಿ (ವಿಮರ್ಶೆ ಲೇಖನಗಳು), ಭೂಮಿ ಗೀತ ವಿಮರ್ಶೆ ಸಂಪದ. ಸಂಪಾದಿತ ವಿಮರ್ಶೆ-(ಸಾಹಿತ್ಯ ವಿಮರ್ಶೆ-1987), ನಾಟಕಗಳು: ನೀಲಾಂಜನೆ ಮತ್ತು ಇತರೆ ನಾಟಕಗಳು, ಅಹಲ್ಯೆ ಮತ್ತು ಇತರೆ ನಾಟಕಗಳು, ತೀರ್ಪು ಮತ್ತು ಇತರೆ ನಾಟಕಗಳು, ದೀನ ದಲಿತರ ನಾಯಕ, ಸಂಗೊಳ್ಳಿ ರಾಯಣ್ಣ ಮತ್ತು ಇತರೆ ನಾಟಕಗಳು, ರೂಪಾಂತರಿತ ನಾಟಕಗಳು: ಜಿಪ್ಸಿಗಳು, ಯುದ್ಧ ಮತ್ತು ಪ್ರೇಮ ಹಾಗೂ ಕೆಲಸದಾಕೆ.
ಇವರಿಗೆ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.
ಧಾರವಾಡದಲ್ಲಿ ನಡೆದ ರಾಷ್ಟ್ರೀಯ ರಷ್ಯನ್ ಭಾಷಾ ಸಮ್ಮೇಳನ, ಮುಂಬಯಿ ಕನ್ನಡ ಸಾಹಿತ್ಯ ಸಮ್ಮೇಳನ, ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸಾಹಿತ್ಯ ಸಮ್ಮೇಳನ ಹಾಗೂ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಬುದ್ದಣ್ಣ ಹಿಂಗಮಿರೆ ಅವರು 17-08- 2012 ರಂದು ನಿಧನರಾದರು.