ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲೂರಿನವರು. ಜಾನಪದ ವಿಷಯದಲ್ಲಿ ಎಂ.ಎ. ಪದವೀಧರರು. 1983ರಲ್ಲಿ ನೀನಾಸಂ, ಜನಸ್ಪಂದನ ಶಿಬಿರಗಳ ಮೂಲಕ ರಂಗಭೂಮಿಗೆ ಪ್ರವೇಶ ಪಡೆದರು. ಬಿ.ವಿ.ಕಾರಂತರೊಂದಿಗೆ ರಂಗಸಂಗೀತ ಕುರಿತು ಅಭ್ಯಾಸ ಮಾಡಿ, ಧಾರವಾಡದಲ್ಲಿ ಜಾನಪದ ಸಂಶೋಧನಾ ಕೇಂದ್ರ ಸ್ಥಾಪಿಸಿದರು. ಇವರ ರಚನೆಯ ಪರಿಷ್ಕೃತ ರಂಗರೂಪ-‘ಶ್ರೀಕೃಷ್ಣ ಪಾರಿಜಾತ’ ದೇಶದೆಲ್ಲೆಡೆ ಸಾವಿರಾರು ಪ್ರಯೋಗಗಳನ್ನು ಕಂಡಿದೆ. ನಟ, ಗಾಯಕ, ಸಂಗೀತ ನಿರ್ದೇಶನ ಹೀಗೆ ಹತ್ತು ಹಲವು ವಲಯದಲ್ಲಿ ಕೃಷಿ ಮಾಡಿದ್ದು, ದಾಸ, ಶರಣ, ತತ್ವಪದಗಳು, ಬಯಲಾಟ ಈ ಎಲ್ಲ ಪ್ರಕಾರದ ಸಾಹಿತ್ಯವನ್ನು ವಿದೇಶದಲ್ಲೂ ಪ್ರಚಾರ-ಪ್ರಸಾರ ಮಾಡಿದ ಕೀರ್ತಿ ಇವರಿಗಿದೆ. ಪತ್ತಾರ ಮಾಸ್ತರರ `ಸಂಗ್ಯಾ ಬಾಳ್ಯಾ' ಪದ್ಯಕ್ಕೆ ರಂಗರೂಪ ನೀಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಅಭಿನವ ಶರೀಫ್ ಹೀಗೆ ಇವರ ಪ್ರತಿಭೆಗೆ ಅನೇಕ ಪುರಸ್ಕಾರಗಳು ಸಂದಿವೆ.