ಬಿ.ವಿ. ಶಿರೂರು (ಬಸವರಾಜವೀರಭದ್ರಪ್ಪ ಶಿರೂರು) ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಿ ತಾಲೂಕಿನ ಆಡೂರು ಗ್ರಾಮದವರು. ತಂದೆ ವೀರಭದ್ರಪ್ಪ, ತಾಯಿ ಅಂದಾನಮ್ಮ. 02-03-1941 ರಂದು ಜನನ. ಆಡೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕೊಪ್ಪಳ, ಕುಕನೂರು ಹಾಗೂ ಯಲಬುರ್ಗಾದಲ್ಲಿ ಮಾಧ್ಯಮಿಕ ಶಿಕ್ಷಣ, ರಾಯಚೂರಿನಲ್ಲಿ ಪಿಯುಸಿ, ಧಾರವಾಡದಲ್ಲಿ ಪದವಿ ಶಿಕ್ಷಣ, ಕರ್ನಾಟಕ ವಿವಿಯಿಂದ ಎಂ.ಎ, ನಂತರ ‘ಶ್ರವಣಬೆಳ್ಗೊಳ-ರಾಜಕೀಯ, ಸಾಂಸ್ಕೃತಿಕ ಮಹತ್ವ’ ವಿಷಯವಾಗಿ ಪಿಎಚ್ ಡಿ (1973) ಪಡೆದರು. ನರೇಗಲ್ಲದ ಶ್ರೀ ಅನ್ನದಾನೀಶ್ವರ ಪದವಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿದ್ದರು. ನಂತರ ಕರ್ನಾಟಕ ವಿವಿಯ ಕನ್ನಡ ಅಧ್ಯಯನ ಪೀಠದಲ್ಲಿಉತ್ತಮ ಸಂಶೋಧಕ, ಮಾರ್ಗದರ್ಶಕ ಎಂದು ಪ್ರಸಿದ್ಧಿ ಪಡೆದು ನಿವೃತ್ತರಾಗಿದ್ದಾರೆ.
ಕೃತಿಗಳು: ಷಟಸ್ಥಲಜ್ಞಾನ ಸೋಮೇಶ್ವರ ಶಿವಯೋಗಿಕೃತ ತೋಂಟದ ಸಿದ್ಧಲಿಂಗೇಶ್ವರನ ಷಟಸ್ಥಲ ಜ್ಞಾನಸಾರಾಮೃತದ ಬೆಡಗಿನ ವಚನದ ಟೀಕೆ, ಜಕ್ಕಣ್ಣಯ್ಯನ ನಿರಾಳ ಮಂತ್ರಗೋಪ್ಯ, ಸಂಪಾದನೆಯ ಸಣ್ಣ ಬರಹದ ಗುರು ಬಸವರಾಜ ದೇವರು ಸೇರಿಸಿದ ಶರಣ ಚಾರಿತ್ಯ್ರದ ವಚನಗಳು, ಶೃಣ ಮುಖಮಂಡನ, ಸ್ವರ ಏಕೋತ್ತರ ಶತಸ್ಥಲ ಇತ್ಯಾದಿ ವಚನ ಸಂಪಾದನಾ ಕೃತಿಗಳು ರಚಿನೆಗೊಂಡಿವೆ.
ಪ್ರಾಚೀನ: ಅನಂತಕವಿಯ ಗೊಮ್ಮಟೇಶ್ವರ ಚರಿತೆ, ಧೋಪದ ರಾಚೇಶನ ಮೊಲ್ಲೆ ಬೊಮ್ಮಯ್ಯಗಳ ಕಾವ್ಯ, ರತ್ನಕರಂಡಕದ ಕಥೆಗಳು, ಪಂ. ವೈ. ನಾಗೇಶ ಶಾಸ್ತ್ರಿಗಳು ವಿರಚಿತ ನಿಡಸೋಸಿಯ ಶ್ರೀ ಶಿವಲಿಂಗ ಶಿವಯೋಗೀಶ್ವರ ಪುರಾಣ, ಭಕ್ತಿ ರಸ ಸೋನೆ, ಸಿದ್ದೇಶ್ವರ ಪುರಾಣ ಇತ್ಯಾದಿ.
ಸಂಸ್ಮರಣ -ಅಭಿನಂಧನ ಗ್ರಂಥಗಳು: ಗೌರವ, ಶಿವದೀಪ್ತಿ, ಹಾಲಕೆರೆ ಶ್ರೀ ಗುರು ಅನ್ನದಾನೀಶ್ವರ ಮಹಾಸ್ವಾಮಿಗಳು, ಸಿದ್ಧರಾಮ ಸಂಪದ, ಸಿದ್ಧಶ್ರೀ, ಸುವರ್ಣ ಪ್ರಸಾದ ಹಾಗೂ ತಾರಣ. ಪಠ್ಯ ಕೃತಿ: ಪಂಚವಟಿ, ನಳಚರಿತೆ ಸಂಗ್ರಹ, ಬಸವಣ್ಣನವರ ವಚನ ವಾಹಿನಿ ಹಾಗೂ ಇತರೆ ಕೃತಿಗಳು: ಹರಿಹರನ ಗಿರಿಜಾ ಕಲ್ಯಾಣ, ಹಾಲಕೆರೆಯ ಶ್ರೀ ಅನ್ನದಾನ ಮಹಾಸ್ವಾಮಿದ್ವಯರು, ಭಿಕ್ಷಾಟನಾ ಚರಿತೆ, ಷಡಕ್ಷರದೇವ, ಆನಂದಕಂದರ ಅಪ್ರಕಟಿತ ಬಾನುಲಿ ರೂಪಕಗಳು, ಪ್ರೊ. ಕೆ.ಜಿ. ಕುಂದಣಗಾರ, ಡಾ. ಎಸ್.ಸಿ. ನಂದಿಮಠದ ಲೇಖನಗಳು, ಲಕ್ಕಣ್ಣ ದಂಡೇಶ. ವೃತ್ತಿಯ ನಿವೃತ್ತಿ ನಂತರವೂ ಬಿ.ವಿ.ಶಿರೂರು ಅವರು ಯುಜಿಸಿ ಅಡಿ ಪ್ರಾಚೀನ ಕರ್ನಾಟಕದ ಶೈವ ಶಾಖೆಗಳು’ ಯೋಜನೆ ಪೂರೈಸಿದ್ದಾರೆ.