ಬಿ.ಎಸ್. ಆರ್ ಎಂದೇ ಖ್ಯಾತಿಯ ಬಿ.ಎಸ್. ರಾಮಕೃಷ್ಣರಾವ್ ಅವರು ಬಾಸೂರಿನವರು. ತರೀಕೆರೆ,ಹಾಗೂ ಶಿವಮೊಗ್ಗದ ಸಹ್ಯಾದ್ರಿ ಕಾಲೇಜುಗಳಲ್ಲಿ ಪದವಿಯವರೆಗೆ ಹಾಗೂ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ. ಪದವಿ ಪಡೆದರು. ಸಂಸ್ಕೃತದಲ್ಲಿ ಪಿ.ಎಚ್.ಡಿ ಹಾಗೂ ವಿದ್ವತ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ, ಹಿಂದೀಭಾಷೆಯಲ್ಲಿ ರತ್ನ, ಕನ್ನಡದಲ್ಲಿ ಎಂ. ಎ ಪದವಿ ನಂತರ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ 20 ವರ್ಷ ಕಾಲ ಸೇವೆ ಸಲ್ಲಿಸಿದರು.
ಭಾರತೀಯ ವಿದ್ಯಾಭವನದ ಶಾಖೆ ಆರಂಭಿಸಲು ಮೆಕ್ಸಿಕೋಗೆ ತೆರಳಿದ್ದು, ಅಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕೃತ ಪ್ರಚಾರಕ್ಕೆ ಸೂಕ್ತ ಅವಕಾಶ ಸಿಗದ ಕಾರಣ ಮತ್ತೇ ಮುಂಬೈಗೆ ಮರಳಿದರು. ಅಲ್ಲಿಯ ಭಾರತೀಯ ವಿದ್ಯಾಭವನದಲ್ಲಿ ಕೆಲಸ ಮಾಡಿದ ನಂತರ ಮತ್ತೇ ಬೆಂಗಳೂರಿಗೆ ಬಂದರು.
ಕೃತಿಗಳು: ಸಂವಿತ್, ಸಂಸ್ಕೃತ ತ್ರೈಮಾಸಿಕ, ವಿಶ್ವಭಾಷಾ, ವಿಪ್ರನುಡಿ, ಸಂಸ್ಕೃತವಾಣಿ, ಕಥಾ ಸರಿತ್ಸಾಗರ ಹೀಗೆ ಸಂಸ್ಕೃತ-ಕನ್ನಡ ರಚನೆಗಳು, ಸಂಪಾದಿತ ಕೃತಿಗಳು, ಸಂಸ್ಕೃತ ನಿಯತಕಾಲಿಕೆಗಳು, ಸ್ಮರಣ ಸಂಚಿಕೆಗಳು ಹೀಗೆ 100ಕ್ಕೂ ಅಧಿಕ ಕೃತಿಗಳ ರಚನೆಗಳು ಇವರ ಸಾಹಿತ್ಯಕ ಸಾಧನೆಯಾಗಿದೆ.
ಡಾ. ಎಚ್.ಕೆ. ರಂಗನಾಥ ಅವರ ಜೊತೆ ಅನೇಕ ಸಂಸ್ಕೃತ ಪ್ರಸಿದ್ಧ ಗೀತೆಗಳ ಮುಕಂದಾ ಮಾಲಾ ಮುಂತಾದ ಸ್ತೋತ್ರಗಳ ಧ್ವನಿಸುರಳಿಗಳನ್ನು ಹೊರತಂದರು. ಶೃಂಗೇರಿ ಶ್ರೀಮಠದ ಶಂಕರ ಕೃಪಾ ಹಾಗೂ ಕಾಶಿಯ ವಿಶ್ವಸಂಸ್ಕೃತ ಪ್ರತಿಷ್ಠಾನದ ವಿಶ್ವ ಭಾಷಾ ಪತ್ರಿಕೆಗಳ ಸಂಪಾದಕರಾಗಿದ್ದರು. ಶಂಕರಮಠದಲ್ಲಿ ಸುರಸರಸ್ವತಿ ಸಂಸ್ಕೃತ ಸಂಸ್ಥೆಯ ಮುಖ್ಯಸ್ಥರಾಗಿ ಸಂಸ್ಥೆ ನಡೆಸುತ್ತಿದ್ದ ಪರೀಕ್ಷೆಗಳಿಗಾಗಿ ಪಾಠ ಹೇಳುತ್ತಿದ್ದರು. ಅವರು ತಮ್ಮ 55ನೇ ವಯಸ್ಸಿನಲ್ಲಿ ನಿಧನರಾದರು.