ಲೇಖಕ, ಪತ್ರಕರ್ತ ಬಿ.ಎನ್. ಮನುಶೆಣೈ ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದವರು. 1983ರಿಂದ ಕೊಡಗು ಜಿಲ್ಲೆಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು 1996ರಿಂದ ಕೊಡಗು ಸಮಾಚಾರ ವಾರಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದೊಂದಿಗೆ ಸಾಹಿತ್ಯಿಕ ಒಡನಾಟವನ್ನೂ ಹೊಂದಿರುವ ಮನುಶೆಣೈ ಅವರ ಹಲವು ಲೇಖನಗಳು ಗೌರಿ ಲಂಕೇಶ್, ನೋಟ, ವಾರ್ತಾ ಭಾರತಿ ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ದಿ.ಎ.ಕೆ.ಸುಬ್ಬಯ್ಯನವರ ನಿಕಟವರ್ತಿಯಾಗಿದ್ದ ಇವರು ತಮ್ಮ “ಕೊಡಗು ಸಮಾಚಾರ” ವಾರಪತ್ರಿಕೆಯಲ್ಲಿ 160 ವಾರಗಳ ಕಾಲ ವೈಚಾರಿಕ ಲೇಖನಗಳನ್ನು ಬರೆಸುವಲ್ಲಿ ಯಶಸ್ವಿಯಾಗಿದ್ದರು. ಈ ಲೇಖನಗಳನ್ನು ಸಂಪಾದಿಸಿ 2004ರಲ್ಲಿ “ಎ.ಕೆ.ಸುಬ್ಬಯ್ಯನವರ ಬಿಚ್ಚು ಮಾತುಗಳು” ಕೃತಿಯನ್ನು ‘ಕೊಡಗು ಸಮಾಚಾರ’ ಪ್ರಕಾಶನದ ಅಡಿಯಲ್ಲಿ ಹೊರ ತಂದಿದ್ದಾರೆ.
2018ರಲ್ಲಿ “ಲಡಾಯಿ ಪ್ರಕಾಶನ”ದಿಂದ ಇವರು ಬರೆದಂತಹ ‘ಎ.ಕೆ.ಸುಬ್ಬಯ್ಯನವರ ಜೀವನ ಚರಿತ್ರೆ’ಯಾದ ‘ಫೀನಿಕ್ಸ್’ ಹಾಗೂ ‘ಎ.ಕೆ.ಸುಬ್ಬಯ್ಯ ಹೋರಾಟಗಾರನ ಪ್ರಸಂಗಗಳು’ ‘ನಿರ್ಭೀತಿಯ ಹೆಜ್ಜೆಗಳು’ ಪ್ರಕಟಗೊಂಡಿದೆ. ಅಲ್ಲದೇ ಹಲವಾರು ಲೇಖನಗಳು ಹಲವಾರು ವಿಶೇಷ ಸಂಚಿಕೆಗಳಲ್ಲಿ ಪ್ರಕಟಗೊಂಡಿದೆ. ಕೊಡಗು ಪ್ರೆಸ್ ಕ್ಲಬಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಜೊತೆಗೆ‘ಕೊಡಗು ಪತ್ರಿಕಾ ಭವನ ಟ್ರಸ್ಟ್’ನ ಮ್ಯಾನೇಜಿಂಗ್ ಟ್ರಸ್ಟಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.