ಅಶ್ವಿನಿ ಶಾನಭಾಗ ಹುಟ್ಟಿ ಬೆಳೆದ ಊರು ಕರ್ನಾಟಕದ ಕರಾವಳಿಯ ಕುಮಟಾ ತಾಲೂಕಿನ ಹರಕಡೆ ಅನ್ನೋ ಪುಟ್ಟ ಹಳ್ಳಿ, ಅಪ್ಪ ಕೃಷಿಕ, ಅಮ್ಮ ಶಿಕ್ಷಕಿ. ಪ್ರೌಢ ಶಿಕ್ಷಣವನ್ನು ಕುಮಟಾದ ಗಿಬ್ ಬಾಲಕಿಯರ ಪ್ರೌಢಶಾಲೆಯಲ್ಲಿ ಮುಗಿಸಿ, ಶಿರಸಿಯ ಎಂ.ಇ.ಎಸ್ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಮುಗಿಸಿದ್ದಾರೆ.
ಪದವಿಯ ನಂತರ ಬೆಂಗಳೂರಿನ ಕೆಲವು ಅಂತರಾಷ್ಟ್ರೀಯ ಕಂಪನಿಗಳಲ್ಲಿ ಸ್ವಲ್ಪ ವರ್ಷಗಳ ಕಾಲ ಕಾರ್ಯನಿರ್ವಹಿಸಿರುವ ಅವರು ಸದ್ಯ ಗೃಹಿಣಿಯಾಗಿ ಬೆಂಗಳೂರಿನಲ್ಲಿ ವಾಸವಿದ್ದಾರೆ. ತಮ್ಮ ಎರಡು ವರ್ಷದ ಮಗನಿಗೆ ಕನ್ನಡದ ಪ್ರಾರಂಭಿಕ ಕಲಿಕೆಯನ್ನು ಶುರು ಮಾಡಬೇಕು ಅಂದುಕೊಂಡಾಗ ಎದುರಾದ ಸಮಸ್ಯೆಗಳು “ಕನ್ನಡ ಅಂಕಲಿಪಿ” ಪುಸ್ತಕದ ರಚನೆಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ. ಕನ್ನಡದಲ್ಲಿ ಪುಟ್ಟ ಮಕ್ಕಳ ಗಮನವನ್ನು ಸೆಳೆಯುವಂತಹ, ಉತ್ತಮ ಗುಣಮಟ್ಟದ ಪುಸ್ತಕಗಳ ಕೊರತೆ ಇರುವುದು ಅವರ ಅರಿವಿಗೆ ಬಂದ ಕಾರಣ ಕನ್ನಡ ಅಂಕಲಿಪಿ ಪುಸ್ತಕ ರಚಿಸಿರುವುದಾಗಿ ಹೇಳುತ್ತಾರೆ. ಈ ಪುಸ್ತಕದಲ್ಲಿ ಮಕ್ಕಳ ಪ್ರಾರಂಭಿಕ ಕನ್ನಡ ಕಲಿಕೆಗೆ ಬೇಕಾಗುವ ವರ್ಣಮಾಲೆ, ಕಾಗುಣಿತ, ಕನ್ನಡ ಅಂಕೆಗಳು, ಗಾದೆಮಾತುಗಳು ಎಲ್ಲವನ್ನು ಬಣ್ಣ ಬಣ್ಣದ ಚಿತ್ರ ಸಹಿತ ಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಇದು ಒಂದು ವರ್ಷದ ಮಗುವಿನಿಂದ ಆರು ವರ್ಷದ ಮಗುವಿಗೆ ಸೂಕ್ತವಾಗುವ ಪುಸ್ತಕವಾಗಿದೆ.