About the Author

’ಆರ್ಯ’ ಎಂಬ ಹೆಸರಿನಿಂದ ಸಾಹಿತ್ಯ ಕೃತಿ ರಚಿಸಿದ ಪಿ. ಆರ್‍. ಆಚಾರ್ಯ ಅವರು ಚಿತ್ರಕಲಾವಿದ, ನಾಟಕಕಾರರೂ ಆಗಿದ್ದರು. 1945ರ ಡಿಸೆಂಬರ್‍ 7ರಂದು ಉಡುಪಿಯಲ್ಲಿ ಜನಿಸಿದ ಆಚಾರ್ಯ ಅವರ ತಂದೆ ವಿಠಲಾಚಾರ್ಯ ಮತ್ತು ತಾಯಿ ರುಕ್ಮಿಣಿ. ಉಡುಪಿಯ ಬೋರ್ಡ್‌ ಹೈಸ್ಕೂಲಿನಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಆರ್ಯ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಮತ್ತು ಸ್ನಾತಕೋತ್ತರ (ಸಂಸ್ಕೃತ) ಪದವಿ ಪಡೆದಿದ್ದರು. 1963ರಲ್ಲಿ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಸ್ವಾಮೀಜಿಯಾಗಿ ಸನ್ಯಾಸತ್ವ ಸ್ವೀಕರಿಸಿದ್ದರು.  1973 ರಲ್ಲಿ ಸನ್ಯಾಸತ್ವ ಬಿಡುವುದರ ಜೊತೆಗೆ ಮಠದ ವ್ಯವಸ್ಥೆಯಿಂದ ಹೊರಬಂದ ಆರ್ಯ ಅವರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿ ಕೆಲಸ ಆರಂಭಿಸಿದರು. 1976ರಲ್ಲಿ ಗೃಹಸ್ಥಾಶ್ರಮ ಸ್ವೀಕರಿಸಿ ಧಾರವಾಡದಲ್ಲಿಯೇ ನೆಲೆ ನಿಂತರು. ಕೇವಲ ಮೂರು ವರ್ಷದ ನಂತರ ಅವರು ಪತ್ನಿ ವಿಯೋಗ ಅನುಭವಿಸಬೇಕಾಯಿತು. ಚಿತ್ರಕಲೆ-ಸಾಹಿತ್ಯ- ನಾಟಕ ಆರ್ಯ ಅವರ ಪ್ರೀತಿಯ ಕಲಾ ಪ್ರಕಾರಗಳು. ಸ್ವಯಂ ಚಿತ್ರಕಲೆಯನ್ನು ಕಲಿತ ಆರ್ಯ ಅವರು ಧಾರವಾಡದ ಮನೋಹರ ಗ್ರಂಥಮಾಲೆಯ ಹಲವಾರು ಗ್ರಂಥಗಳಿಗೆ ಮುಖಪುಟ ರಚಿಸಿದ್ದಾರೆ. ಬಹುಕಾಲ ಧಾರವಾಡದಲ್ಲಿಯೇ ನೆಲೆಸಿದ್ದ ಆರ್ಯ ಅವರು ಮಂಗಳೂರು, ಬೆಂಗಳೂರು, ಮುಂಬಯಿಗಳಲ್ಲಿ ಚಿತ್ರಕಲೆಯ ಏಕವ್ಯಕ್ತಿ ಪ್ರದರ್ಶನ ಏರ್ಪಡಿಸಿದ್ದರು. ಜರ್ಮನಿಯಲ್ಲಿ ಮೂರು ಬಾರಿ, ಇಟಲಿಯಲ್ಲಿ ನಾಲ್ಕು ಸಲ ಹಾಗೂ ಪ್ಯಾರೀಸ್ ನಲ್ಲಿ ಮೂರು ಸಲ ಹಾಗೂ ನೆದರ್‍ ಲ್ಯಾಂಡ್, ಫಿನ್ಲೆಂಡ್ ಗಳಲ್ಲಿಯೂ ಏಕವ್ಯಕ್ತಿ ಪ್ರದರ್ಶನ ನಡೆಸಿದ್ದರು.

ನಾಟಕ-ಸಣ್ಣಕತೆ- ಕಾದಂಬರಿ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಕೃತಿ ಪ್ರಕಟಿಸಿದ್ದರು.

ದ್ರಷ್ಟ್ರ, ದೇಶಿ ಪರದೇಶಿ ಕಥೆಗಳು, ಹೈಬ್ರಿಡ್ ಕಥೆಗಳು, ಕರುಣೆ ಏಕಾಂತ (ಸಣ್ಣಕತೆಗಳು), ಗುರು  (ಕಾದಂಬರಿ). ಮನುಷ್ಯ, Oh Master and other Poems (ಕಾವ್ಯ). ಕೊಕ್ಕರೆ ತಾತ (ಕಥೆಗಳು), ಮೋಡರಾಜ, ಕುರಿ ಕೊಂದ ಕುಮಾರ, ಮಳೆ ಬಂತು ಮಳೆ (ಮಕ್ಕಳ ಸಾಹಿತ್ಯ), ಭ್ರೂಣ, ಪಾತಾಳ ಗರಡಿ, ಯಜ್ಞ, ಬಯಲು ಆಲಯದೊಳಗೇ, ಇಲ್ಲದಿದ್ದವರು (ನಾಟಕ) ಕಲಾ ಮಂಡಲದ ಅಧ್ಯಕ್ಷರಾಗಿದ್ದ ಆರ್ಯ ಅವರು ವಿದ್ಯಾ ಮೆಡಿಕಲ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು. ಕರ್ನಾಟಕ ಲಲಿತ ಕಲಾ ಅಕಾಡಮಿಯು ಆರ್ಯ ಅವರಿಗೆ ಗೌರವ ಪ್ರಶಸ್ತಿ ನೀಡಿ ಗೌರವಿಸಿತ್ತು. ಆರ್ಯ ಅವರಿಗೆ ಅರವತ್ತು ತುಂಬಿದ ಸಂದರ್ಭದಲ್ಲಿ ’ಆರ್ಯಾವರ್ತ’ ಎಂಬ ಅಭಿನಂದನ ಗ್ರಂಥ ಸಲ್ಲಿಸಲಾಗಿತ್ತು. ಹೆಸರಾಂತ ಕಲಾವಿದ ಜಿ.ಎಸ್.ಶೆಣೈ ಪ್ರಶಸ್ತಿ ಕೂಡ ಆರ್ಯ ಅವರಿಗೆ ಸಂದಿತ್ತು. ಹಲವು ಸಾಕ್ಷ್ಯ ಚಿತ್ರ ತಯಾರಿಸುರವ ಆರ್ಯ ಅವರಿಗೆ ’ಕಿತಾಪತಿ’ ಚಲನಚಿತ್ರ ನಿರ್ದೇಶನಕ್ಕಾಗಿ ಪ್ರಶಸ್ತಿ ಪಡೆದಿದ್ದರು. 2016ರ ಆಗಸ್ಟ್ 19ರಂದು ಧಾರವಾಡದಲ್ಲಿ ಸಂಭವಿಸಿದ ಸ್ಕೂಟರ್‍ ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಸೆಪ್ಟೆಂಬರ್‍ 30ರಂದು ಉಡುಪಿಯಲ್ಲಿ ನಿಧನರಾದರು.



 

ಆರ್ಯ (ಪಿ.  ಆರ್. ಆಚಾರ್ಯ)

(07 Dec 1945-19 Aug 2016)