ಅಮಿತಾ ಭಾಗವತ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕೊಂಕೇರಿ (ಕಡತೋಕಾ). ಅಮಿತಾರ ಬಾಲ್ಯ ಮತ್ತು ಕಾಲೇಜು ಶಿಕ್ಷಣ, ಕಡಲ ಕಿನಾರೆಯ ಕಾರವಾರದಲ್ಲಿ ಪೂರ್ಣಗೊಳಿಸಿದರು. ಮದುವೆಯ ನಂತರ ಮುಂಬಯಿಗೆ ಬಂದ ನಂತರ ಅವರು ಕಾನೂನು ಅಧ್ಯಯನ ಮಾಡಿ ಕಳೆದ ಮೂರು ದಶಕಗಳಿಂದ ನ್ಯಾಯವಾದಿಗಳಾಗಿದ್ದಾರೆ. ಕಳೆದ 15 ವರ್ಷಗಳಿಂದ ‘ಹವ್ಯಕ ಸಂದೇಶ’ ಎನ್ನುವ ಮುಂಬಯಿ ಕನ್ನಡ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ. ಮುಂಬಯಿಯ ಕನ್ನಡ ಚಟುವಟಿಕೆಗಳಲ್ಲಿ ಆಸ್ಥೆಯಿಂದ ಪಾಲ್ಗೊಳ್ಳುತ್ತಾರೆ. ಆಗಾಗ ಕವಿತೆ, ಕಥೆ, ಪ್ರಬಂಧಗಳನ್ನು ಸದ್ದಿಲ್ಲದೆ ಬರೆಯುತ್ತಾ ಬಂದಿರುವ ಅವರ ಮೊದಲ ಕವನ ಸಂಕಲನ ‘ಕುಮುದಾಳ ಭಾನುವಾರ’ (2015), ‘ನೀಲಿ ನಕ್ಷೆ’ ಕಾದಂಬರಿಯು ಅಮಿತಾ ಭಾಗವತ್ ಅವರ ಪ್ರಥಮ ಕಾದಂಬರಿಯಾಗಿದೆ.