ಕನ್ನಡದ ಜನಪ್ರಿಯ ಕಥೆಗಾರರಾದ ಅಬ್ಬಾಸ್ ಮೇಲಿನಮನಿ ಹುಟ್ಟೂರು ಬಾಗಲಕೋಟೆ. 1954 ಮಾರ್ಚ್ 05ರಂದು ಜನಸಿದ ಇವರು ಪದವಿ ಶಿಕ್ಷಣದವರೆಗಿನ ಬಾಗಲಕೋಟೆಯ ನಾನಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆದ ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಇವರು ಬರೆದಿರುವ ಕವನ ಸಂಕಲನಗಳು: ಕಥೆಯಾದಳು ಹುಡುಗಿ, ಭಾವೈಕ್ಯ ಬಂಧ, ಪ್ರೀತಿ ಬದುಕಿನ ಹಾಡು. ಕಥಾ ಸಂಕಲನಗಳು: ಪ್ರೀತಿಸಿದವರು, ಕಣ್ಣ ಮುಂದಿನ ಕಥೆ, ಅರ್ಧಸತ್ಯಗಳು ಇತ್ಯಾದಿ. ಕಾದಂಬರಿಗಳು: ಜನ್ನತ್ ಮೊಹಲ್ಲ. ಲೇಖನ: ಸೌಹಾರ್ದ ಸಂಸ್ಕೃತಿ, ಸಂಪಾದಿತ: ಸಣ್ಣಕತೆ, ಕ್ಯಾದಗಿ ಪ್ರಜ್ಞೆ ಮುಳುಗದ ಕಥೆಗಳು. ಇವರಿಗೆ ಮಂಗಳೂರಿನ ಮಹ್ಯುದ್ದೀನ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಶಿವಮೊಗ್ಗ ಕ.ಸ.ಪ. ಲಂಕೇಶ್ ಕಥಾ ಪ್ರಶಸ್ತಿ, ತುಷಾರ ಎಚ್.ಎಂ.ಟಿ. ಅತ್ಯುತ್ತಮ ಕಥಾ ಪ್ರಶಸ್ತಿಗಳು ಲಭಿಸಿವೆ. ಅವರು 21 ಸೆಪ್ಟಂಬರ್ 2020ರಲ್ಲಿ ನಿಧನರಾದರು.