ಕುಮಾರವ್ಯಾಸನ ಭಾರತ ಕಥೆಯನ್ನು ಗಮಕ ವ್ಯಾಖ್ಯಾನ ಮಾಡುವ ಮೂಲಕ ತಮ್ಮದೇ ಛಾಪು ಮೂಡಿಸಿದವರು ಎ.ವಿ.ಪ್ರಸನ್ನ. ಹಾಸನ ಜಿಲ್ಲೆಯ ಆಲೂರು ತಾಲೂಕಿನ (ಜನನ: 18-08-1950) ಪೊನ್ನಾಥಪುರದವರು. ತಾಯಿ ಪಾರ್ವತಮ್ಮ ತಂದೆ ಎ.ಜಿ.ವೆಂಕಟನಾರಾಯಣಪ್ಪ. ಪೊನ್ನಾಥಪುರ ಮತ್ತು ಗೊರೂರಿನಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಬೆಂಗಳೂರಿನಲ್ಲಿ ವೃತ್ತಿಜೀವನದ ಜೊತೆ ಜೊತೆಗೆ ಸಂಜೆ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪೂರೈಸಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಕಾನೂನು ಪದವೀಧರರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೂಲಕ ‘ಕುಮಾರವ್ಯಾಸನ ಕಾವ್ಯ ಚಿತ್ರಗಳು ಒಂದು ಅಧ್ಯಯನ’ ವಿಷಯ ಕುರಿತು ಮಹಾಪ್ರಬಂಧ ಮಂಡಿಸಿ ಡಿ.ಲಿಟ್ ಪದವಿಗೆ ಭಾಜನರಾದರು.
ಬೆಂಗಳೂರಿನ ಜೆ.ಕೆ.ಡಬ್ಲ್ಯೂ ಕಾರ್ಖಾನೆಯಲ್ಲಿ ಉದ್ಯೋಗ, ಎಂ.ಇ.ಎಸ್ ಸಂಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಕರ್ನಾಟಕ ಆಡಳಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿಶೇಷ ಜಿಲ್ಲಾಧಿಕಾರಿಯಾಗಿ ನಂತರ ನಿವೃತ್ತರಾದರು.
ಸಾಹಿತ್ಯಾಸಕ್ತ ಸಂಘಟನೆಗಳ ವೇದಿಕೆಗಳಲ್ಲಿ ಹಳಗನ್ನಡ ಸಾಹಿತ್ಯ ಮತ್ತು ಕುಮಾರವ್ಯಾಸ, ರಾಘವಾಂಕ, ಪಂಪ, ರನ್ನ, ಲಕ್ಷ್ಮೀಶ ಕವಿಗಳ-ಕೃತಿಗಳ ಬಗ್ಗೆ ವಿಸ್ತೃತ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಶಿವಮೊಗ್ಗದ ‘ಗಮಕ ಸಂಪದ’ ಮಾಸಿಕಕ್ಕೆ ‘ಗಮಕಸಾಹಿತ್ಯ’ ಅಂಕಣ ಬರೆಯುತ್ತಿದ್ದಾರೆ. ಎಲ್ಲ ಲೇಖನಗಳನ್ನು ಶಬ್ದಲಂಘನ ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ. ಕುಮಾರವ್ಯಾಸ ಮತ್ತು ತಿಮ್ಮಣ್ಣ ಕವಿಗಳ ಭಾರತಗಳನ್ನು ‘ಕನ್ನಡ ಭಾರತ’ ಹೆಸರಿನಲ್ಲಿ ಪರಿಷ್ಕರಿಸಿ ಸಂಪಾದಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಕುಮಾರವ್ಯಾಸ ಪ್ರತಿಮೆ ಸ್ಥಾಪನೆಯಲ್ಲಿಇವರದು ಪ್ರಮುಖ ಪಾತ್ರ. ತುಮಕೂರು ವಿಶ್ವವಿದ್ಯಾಲಯದಲ್ಲಿ ಕುಮಾರವ್ಯಾಸ ಅಧ್ಯಯನ ಪೀಠ ಸ್ಥಾಪಿಸಿದರು. ಕರ್ನಾಟಕ ಸರ್ಕಾರವು ಗಮಕ ಕಲಾವಿದರಿಗಾಗಿ ನೀಡುವ ರಾಜ್ಯ ಪ್ರಶಸ್ತಿಯಾದ ಕುಮಾರವ್ಯಾಸ ಪ್ರಶಸ್ತಿ ಸ್ಥಾಪನೆಯಲ್ಲೂ ಶ್ರಮಿಸಿದ್ದಾರೆ. ಹಳಗನ್ನಡ ಪರಂಪರೆಯ ಸಂರಕ್ಷಣೆಗಾಗಿ ಅವರ ಸೇವೆಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ‘ಕರ್ನಾಟಕ ಕಲಾಶ್ರೀ’ ಸೇರಿದಂತೆ ನಾಡಿನ ಹಲವು ಸಂಗೀತ ಮತ್ತು ಸಂಸ್ಕೃತಿ ಸಂಸ್ಥೆಗಳ ಪ್ರತಿಷ್ಠಿತ ಗೌರವ ಅವರ ಸಿರಿಮುಡಿಗೇರಿದೆ. ಗಮಕಗ್ರಾಮ ಹೊಸಹಳ್ಳಿಯ ರಾಜ್ಯಮಟ್ಟದ ಗಮಕ ಸಮ್ಮೇಳನಾಧ್ಯಕ್ಷತೆಯ ಗೌರವವೂ ದಕ್ಕಿದೆ..