ಎ.ಷಣ್ಮುಖ ಅವರು ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ತರೀಕರೆ ತಾಲ್ಲೂಕಿನ ಮಳಲೀಚೆನ್ನೇನಹಳ್ಳಿಯಲ್ಲಿ. ಶಿವಮೊಗ್ಗೆಯ ಡಿವಿಎಸ್ ಕಾಲೇಜಿನಲ್ಲಿ ಪದವಿ ಪಡೆದು, ಕುವೆಂಪು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಪದವಿಯನ್ನು ಪೂರೈಸಿ ಅಲ್ಲೇ ಪ್ರಾಧ್ಯಾಪಕರಾಗಿ ಹಾಗೂ ವಿಭಾಗಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ ಗೌರವ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರೈತರ ಆತ್ಮಹತ್ಯೆ, ಜಾತಿ ಮತ್ತು ದಲಿತರ ಸ್ಥಿತಿಗತಿಗಳು, ಸ್ಟೀರಿಯೊಟೈಪ್ಡ್ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳು, ಅಸ್ಪೃಶ್ಯತೆಯ ಆಚರಣೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಯುಜಿಸಿ ಮತ್ತು ಯುರೋಪಿಯನ್ ಯೂನಿಯನ್ (ಘೆಂಟ್ ವಿಶ್ವವಿದ್ಯಾಲಯದ ಸಹಯೋಗದ) ಪ್ರಾಜೆಕ್ಟ್‌ಗಳಲ್ಲಿ ಸಂಶೋಧಕರಾಗಿ ಕೆಲಸ ನಿರ್ವಹಿಸಿದ್ದಾರೆ. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಯುರೋಪಿಯನ್ ಒಕ್ಕೂಟದ ಏಷಿಯಾ-ಲಿಂಕ್ ಸಂಶೋಧನಾ ಯೋಜನೆಯಲ್ಲಿ (2005-07), ಫ್ಲೆಮಿಶ್ ಇಂಟರ್ ಯೂನಿವರ್ಸಿಟಿ ಕೌನ್ಸಿಲ್‌ನ ಸಂಶೋಧನಾ ಯೋಜನೆಯ ಭಾಗವಾಗಿ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದಲ್ಲಿ ಉಪನಿರ್ದೇಶಕರಾಗಿ (2007-12) ಹಲವು ಸಂಶೋಧನೆಗಳಲ್ಲಿ ತೊಡಗಿಸಿಕೊಂಡವರು. ಪ್ರಸ್ತುತ ಎನ್.ಇ.ಪಿ.-2020 ಶಾಲಾಶಿಕ್ಷಣ (ಸಮಾಜವಿಜ್ಞಾನ) ಉನ್ನತ ಶಿಕ್ಷಣದ ರಾಜ್ಯಶಾಸ್ತ್ರ ಪಠ್ಯಕ್ರಮ ರಚನೆಯ ರಾಜ್ಯ ಸಮಿತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪಠ್ಯಪುಸ್ತಕಗಳ ಜೊತೆಗೆ ’ಗ್ರಾಮೀಣ ದಲಿತರ ಸ್ಥಿತಿಗತಿ’, ’ಜನಲೋಕಪಾಲ’, ’ಕೊಟ್ಟಕುದುರೆಯನೇರಲರಿಯದೆ’ (ಸಹ ಸಂಪಾದಕರಾಗಿ) ಇತ್ಯಾದಿ ಸಂಶೋಧನಾ ಕೃತಿಗಳನ್ನು ನೀಡಿದ್ದಾರೆ. ಕರ್ನಾಟಕ ಜರ್ನಲ್ ಆಫ್ ಪಾಲಿಟಿಕ್ಸ್‌ನ 18ನೇ (2018) ಆವೃತ್ತಿಯನ್ನು ಸಂಪಾದಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿಯೂ ವಿವಿಧ ನಿಯತಕಾಲಿಕೆಗಳು ಮತ್ತು ಸಂಪಾದಿತ ಕೃತಿಗಳಲ್ಲಿ 45ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಪ್ರಕಟವಾಗಿವೆ. ಅಂತರ್ಜಾಲದ ಬ್ಲಾಗ್‌ಗಳಿಗೆ ಸಹ ಹಲವಾರು ಲೇಖನಗಳನ್ನು ಬರೆದಿದ್ದಾರೆ.