ಮೂಲತಃ ಬೆಂಗಳೂರಿನವರಾದ ಟಿ.ಜಿ. ರಾಘವ ಕನ್ನಡದ ಪ್ರಮುಖ ಕಥೆಗಾರರ ಪೈಕಿ ಒಬ್ಬರು. ತಂದೆ ಗೋವಿಂದಾಚಾರ್ (ಆಂಧ್ರದವರು), ತಾಯಿ ತಂಗಮ್ಮ (ತಮಿಳಿನವರು). ಹೀಗಾಗಿ ರಾಘವರ ಮಾತೃಭಾಷೆ ತಮಿಳು. ಆದರೆ, ಕನ್ನಡದಲ್ಲಿ ಕಲಿತು ಕನ್ನಡದ ಪ್ರಮುಖ ಕಥೆಗಾರರಾದರು. ಗುಬ್ಬಿ, ಶ್ರೀನಿವಾಸಪುರ, ಕೋಲಾರದಲ್ಲಿ ಮೆಟ್ರಿಕ್ ವರೆಗೆ ಶಿಕ್ಷಣ ಪೂರೈಸಿದರು.
ಇವರ ಮೊದಲ ಕಥೆ ಟಿಕ್, ಟಿಕ್. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಇಂಗ್ಲಿಷ್ ಭಾಷೆಯ ‘ವಾರ್ಸಿಟಿ ಟೈಮ್ಸ್’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಕಾಲೇಜಿನ ಸಣ್ಣ ಕಥಾ ಸ್ಪರ್ಧೆಯಲ್ಲಿ ‘ಹಾವು ಹೆಡೆಯಾಡಿತು’ ಬಹುಮಾನ ಗಳಿಸಿತು. ಬಿ.ಎಸ್ಸಿ ನಂತರ ಬೆಂಗಳೂರಿನ ಸೇಯಿಂಟ್ ಅಲೋಷಿಯಸ್ ಹೈಸ್ಕೂಲಿನಲ್ಲಿ ಅಧ್ಯಾಪಕರಾದರು. ನಂತರ ಸಾಗರದ ಲಾಲ್‌ಬಹದ್ದೂರ್ ಕಾಲೇಜಿನಲ್ಲಿ ಟ್ಯೂಟರ್ ಆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂ.ಎ. ಪದವೀಧರರಾದರು. ಮೈಸೂರಿನ ಜೆ.ಎಸ್.ಎಸ್. ಕಾಲೇಜಿನಲ್ಲಿ ಅಧ್ಯಾಪಕರಾದರು. ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದರು.
ವಿಕೃತಿ (ಕಾದಂಬರಿ). ಪ್ರೇತಗಳು (ನಾಟಕ ಪ್ರಕಟಿತ). ಮನೆ -ಕಾದಂಬರಿ (ಗಿರೀಶ್ ಕಾಸರವಳ್ಳಿ ನಿರ್ದೇಶನ) ಕನ್ನಡ-ಹಿಂದಿ ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿ ಲಭಿಸಿತು. ಮನೆ- ಕಾದಂಬರಿ ಹಾಗೂ ಶ್ರಾದ್ಧ ಕಥೆ ಮರಾಠಿಗೂ, ಪ್ರೇತಗಳು -ಮಲೆಯಾಳಂಗೂ ಅನುವಾದಗೊಂಡಿದೆ. ಮತ್ತೊಂದು ಕಥೆ ಉರ್ದುವಿಗೆ ಭಾಷಾಂತರವಾಗಿ ಪಾಕಿಸ್ತಾನ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಟಿ.ಜಿ.ರಾಘವರ ಕಥೆಗಳು (ಕಥಾಸಂಕಲನ) ಪ್ರಕಟವಾಗಿದೆ.