About the Author

ಸ್ತ್ರೀ ಸಮಾನತೆ, ಹಕ್ಕು ಬಾಧ್ಯತೆಗಳ ಬಗ್ಗೆ ಚಿಂತಿಸುತ್ತಿದ್ದ ಸುಶೀಲಾ ಕೊಪ್ಪರ್‌ ಅವರು ಬೆಳಗಾಂ ಜಿಲ್ಲೆಯ ಬೆಳಗಾಂ ತಾಲ್ಲೂಕಿನ ಹುದಲಿ ಗ್ರಾಮದಲ್ಲಿ 1924ರ ಮಾಚ್ 16 ರಂದು ಜನಿಸಿದರು. ‘ಪತ್ರಿಕೋದ್ಯಮಕ್ಕೆ ಮಹಿಳೆಯರ ಕೊಡುಗೆ’  ಪುಸ್ತಕ ಬರೆದ ಮೊದಲ ಮಹಿಳೆ ಸುಶೀಲಾ ಕೊಪ್ಪರ. ತಂದೆ ಮಧ್ವರಾಯರು, ತಾಯಿ ಕಮಲಾಬಾಯಿ. ಅವರ ‘ಲೇಖಕನ ಹೆಂಡತಿ ಮತ್ತು ಇತರ ಕಥೆಗಳು’ ಸಂಕಲನಕ್ಕೆ ರಾಜ್ಯ ಸರಕಾರದ ಪ್ರಶಸ್ತಿ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಸುವ ಕನ್ನಡ ರತ್ನ ಪರೀಕ್ಷೆಗೆ ಪಠ್ಯವಾಗಿಯೂ ಈ ಕೃತಿ ಆಯ್ಕೆಯಾಗಿತ್ತು. ಕಥೆ ಬರೆಯುವುದರ ಜೊತೆಗೆ ಹಲವಾರು ಲೇಖನಗಳನ್ನು ಸಂಯುಕ್ತ ಕರ್ನಾಟಕ ಪತ್ರಿಕೆಯ ಮಹಿಳಾ ಪುಟಕ್ಕೆ ಬರೆಯತೊಡಗಿದರು. ಹೀಗೆ ಬರೆದುದರ ಸಂಕಲನವೇ ‘ಮಹಿಳೆಯರಲ್ಲಿ ಮಾತುಕತೆ’ಯಾಗಿ ಪ್ರಕಟಗೊಂಡಿತು.

ಕಥಾಸಂಕಲನ ‘ಸಾಲುದೀಪ’. ಕಥೆ ಬರೆದಂತೆ ಹಲವಾರು ಲೇಖನಗಳು, ಸಂದರ್ಶನಗಳು, ರೇಡಿಯೋ ರೂಪಕಗಳನ್ನೂ ಬರೆದರು. ಇದೇ ಸಂದರ್ಭದಲ್ಲಿ ಮರಾಠಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಸ. ಖಾಂಡೇಕರರ ಕಾದಂಬರಿಯನ್ನು ‘ಕಮರಿದ ಕನಸು’ ಎಂದು, ‘ಅಶ್ರು’ ಎಂಬ ಕಾದಂಬರಿಯನ್ನು ಅದೇ ಹೆಸರಿನಿಂದ ಕನ್ನಡಕ್ಕೆ ಅನುವಾದಿಸಿದಾಗ ಕನ್ನಡ ಪ್ರಭ ಹಾಗೂ ಕರ್ಮವೀರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ‘ಪಡುವಣದ ಪತ್ರಮಾಲೆ’ ಹಾಗೂ ‘ಪತ್ರಿಕೋದ್ಯಮಕ್ಕೆ ಮಹಿಳೆಯರ ಕೊಡುಗೆ’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ. 1994 ರಲ್ಲಿ ಪ್ರೆಸ್ ಅಕಾಡಮಿ ಅವಾರ್ಡ್ ದೊರೆಯಿತು. ಹೀಗೆ ಪತ್ರಿಕೋದ್ಯಮ, ಸಮಾಜಸೇವೆಯ ನಡುವೆಯೂ ರಚಿಸಿದ ಕೃತಿಗಳು ಹಲವಾರು. 2 ಕಥಾ ಸಂಕಲನಗಳಲ್ಲದೆ ನೆಹರು ವಿಚಾರ ದರ್ಶನ (ಹಿಂದಿ ಅನುವಾದ), ಅಮ್ಮ ರಿಟೈರ್ ಆಗ್ತಾಳೆ (ಮರಾಠಿ ಅನುವಾದ) ಸವಿಗಂಧ (ಮಕ್ಕಳ ಕಥಾಸಂಕಲನ-ಇಂಗ್ಲಿಷ್‌ನಿಂದ) ಮುಂತಾದ ಅನುವಾದ ಕೃತಿಗಳೂ ಸೇರಿ ಒಟ್ಟು 10 ಕೃತಿಗಳು ಪ್ರಕಟಗೊಂಡಿವೆ. ‘

ಲೇಖಕನ ಹೆಂಡತಿ ಮತ್ತು ಇತರ ಕಥೆಗಳಿಗೆ’ ರಾಜ್ಯಪ್ರಶಸ್ತಿ; ‘ಮಹಿಳೆಯರಲ್ಲಿ ‘ಮಾತುಕತೆ’ ಲೇಖನ ಸಂಗ್ರಹಕ್ಕೆ ಧಾರವಾಡದ ಜನತಾಶಿಕ್ಷಣ ಸಮಿತಿ ಪ್ರಶಸ್ತಿ; ‘ಅಶ್ರು’ ಕಾದಂಬರಿ ಅನುವಾದಕ್ಕೆ ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ. ಸಾವಿತ್ರಮ್ಮ ದತ್ತಿ ನಿಧಿ ಪ್ರಶಸ್ತಿ ಮತ್ತು ಕೆನಡಾ ಕನ್ನಡ ಸಂಘದಿಂದ ‘ಡಿಸ್ಟಿಂಗ್ವಿಷ್ಡ್ ಮೆಂಬರ್ ಅವಾರ್ಡ್‌’ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದು, ಸಾಹಿತ್ಯ ಹಾಗೂ ಪತ್ರಿಕಾ ಲೋಕದಿಂದ ದೂರವಾದದ್ದು 2006ರ ಫೆಬ್ರವರಿ 25 ರಂದು.

ಸುಶೀಲಾ ಕೊಪ್ಪರ್‌

(16 Mar 1924)

Books by Author