ಕವಯಿತ್ರಿ, ಕತೆಗಾರ್ತಿ ಸಿಂಧು ಚಂದ್ರ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯವರು. ತಂದೆ ಜಯರಾಮ ಹೆಗಡೆ, ತಾಯಿ ರೇವತಿ. ಬದುಕಿನ ಮೊದಲ ಹನ್ನೆರಡು ವರ್ಷಗಳನ್ನು ಹಾಸನದಲ್ಲಿ ಕಳೆದಿರುವ ಸಿಂಧು ಪದವಿಯವರೆಗೆ ಓದಿದ್ದು ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ. ಕರ್ನಾಟಕ ವಿಶ್ವ ವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕೆ.ಡಿ.ಸಿ.ಸಿ ಬ್ಯಾಂಕ್ ಉದ್ಯೋಗಿ. ಬದುಕಿನ ಅನುಭವದಿಂದಲೇ ಸತ್ವಯುತ ಬರವಣಿಗೆಗೆ ಬುನಾದಿ ದಕ್ಕುತ್ತದೆ ಎಂದು ನಂಬಿರುವ ಅವರು 2010ರಲ್ಲಿ ತಮ್ಮ ಚೊಚ್ಚಲ ಕವನ ಸಂಕಲನ ‘ನಗುತ್ತೇನೆ ಮರೆಯಲ್ಲ’ ಪ್ರಕಟಿಸಿದರು.
ಇದೀಗ ಕಣ್ಣಿಗೆ 'ಕನಸಿನ ಕಾಡಿಗೆಯನ್ನು ಹಚ್ಚಿಕೊಂಡು’, ‘ಹಗಲುರಾತ್ರಿಗಳನ್ನು' ವಿಭಿನ್ನ ದೃಷ್ಟಿಕೋನ ದಿಂದ ನೋಡಿ ಅವುಗಳನ್ನು ದಾಖಲಿಸುವ ಪ್ರಯತ್ನವನ್ನು 'ಪತ್ರಸಂವಾದ'ದ ಮೂಲಕ ಮಾಡಿದ್ದಾರೆ ಮತ್ತು 10 ಸಣ್ಣ ಕಥೆಗಳನ್ನು ಅತ್ಮೀಯವಾಗಿ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಈ ಕೃತಿಗೆ 2014 ನೇ ಸಾಲಿನಲ್ಲಿ ಕರ್ನಾಟಕ ಸಂಘ ಶಿವಮೊಗ್ಗ ಇವರಿಂದ ಪ್ರತಿಷ್ಠಿತ ಎಂ.ಕೆ. ಇಂದಿರಾ' ಪ್ರಶಸ್ತಿ ದೊರೆತಿದೆ ಹಾಗೂ ಅವನಿ ರಸಿಕರ ರಂಗ ಧಾರವಾಡದವರು ಏರ್ಪಡಿಸಿದ್ದ ವಿ. ದೇವಾಂಗನಾ ಶಾಸ್ತ್ರಿ ಸ್ಮಾರಕ ರಾಜ್ಯಮಟ್ಟದ ಕಥಾಸಂಕಲನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ದೊರೆತಿದೆ. ಅವರ ಮತ್ತೊಂದು ಕವನ ಸಂಕಲನ 'ರಸ್ತೆಯಲ್ಲಿ ಮೇ ಫ್ಲವರ್' 2015 ರಲ್ಲಿ ಪ್ರಕಟಗೊಂಡಿದೆ.