About the Author

ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ...ಇಂತಹ ಉತ್ತಮ ಕವಿತೆ ಬರೆದ ಕವಿ ಶಂ.ಗು. ಬಿರಾದಾರ ಜನಿಸಿದ್ದು (17-05-1926) ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬಬಲೇಶ್ವರದಲ್ಲಿ.. ತಂದೆ ಗುರುಗೌಡ, ತಾಯಿ ರುದ್ರಾಂಬಿಕಾ. ಪ್ರಾರಂಭಿಕ ಶಿಕ್ಷಣ ಬಬಲೇಶ್ವರದಲ್ಲಿ. ಮುಲ್ಕಿ ಪರೀಕ್ಷೆಯ ನಂತರ ಬಿಜಾಪುರದ ಟ್ರೈನಿಂಗ್‌ ಕಾಲೇಜಿಗೆ ಸೇರಿದರು. ಉಪಾಧ್ಯಾಯರಾಗಿ ವಿವಿಧೆಡೆ ಸೇವೆ ಸಲ್ಲಿಸಿ 1981 ರಲ್ಲಿ ನಿವೃತ್ತರಾದರು. ‘ಬಿಜಾಪುರ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ’ದ ಅಧ್ಯಕ್ಷರಾಗಿದ್ದರು. 

ಬೆಳಕಿನೆಡೆಗೆ -ಇವರ ಕಾದಂಬರಿ. ಬಸವಶತಕ (ಖಂಡಕಾವ್ಯ), ಭಾವಸಂಗಮ (ಕವನ ಸಂಕಲನ), ಬಬಲೇಶ್ವರ ಬೆಳಕು (ಚರಿತ್ರೆ), ದೇವನೊಡನೆ ಪ್ರಥಮ ರಾತ್ರಿ (ಕಥಾ ಸಂಕಲನ), ಭಯೋತ್ಪಾದಕರು (ಲಲಿತ ಪ್ರಬಂಧಗಳು), ಹಣತೆಗಳು (ಚುಟುಕುಹನಿಗವನ) ಪ್ರಕಟಗೊಂಡಿವೆ. ಸಂಪಾದಿಸಿದ ಕೃತಿಗಳು ವಸೀತೆನೆ ಸುಲಗಾಯಿ ವಿಜಾಪುರ ಜಿಲ್ಲಾ ಕವಿಗಳ ಆಯ್ದ ಕವನಸಂಕಲನ, ವಿಜಯವಾಣಿ (ಸಾಹಿತ್ಯ ಸಮೀಕ್ಷೆ), ಮಕ್ಕಳ ಸಾಹಿತ್ಯ ೧೯೮೮ ಮತ್ತು ಮಕ್ಕಳ ಕತೆಗಳು (ಕರ್ನಾಟಕ ಸಾಹಿತ್ಯ ಅಕಾಡಮಿಗಾಗಿ), ಅರ್ಪಣ (ಮಕ್ಕಳ ಕವನ ಸಂಕಲನ) ಜಯತೀರ್ಥ ಜಯತೀರ್ಥ ರಾಜಪುರೋಹಿತರ (ಅಭಿನಂದನ ಗ್ರಂಥ)

ಪ್ರಶಸ್ತಿಗಳು: ರುದ್ರವೀಣೆ ಕಥಾಸಂಕಲನಕ್ಕೆ ಮೈಸೂರು ಸರಕಾರದ ಸಂಸ್ಕೃತಿ ಇಲಾಖೆಯ ಬಹುಮಾನ, ಗಿಡ್ಡ ಹೆಂಡತಿ ಲೇಸು ಲಲಿತ ಪ್ರಬಂಧಗಳ ಸಂಕಲನಕ್ಕೆ ಧಾರವಾಡದ ವಿದ್ಯಾವರ್ಧಕ ಸಂಘದ ಬಹುಮಾನ, ನೌಕರಿ ಹುಚ್ಚು ನಾಟಕಕ್ಕೆ ಭಾರತಿ ಸಾಹಿತ್ಯ ಭಂಡಾರದ ಪುರಸ್ಕಾರ, ನನ್ನ ಹಾಡು, ಕಾರಂಜಿ, ಮಂಗ್ಯಾ ಮಂಗ್ಯಾ ಕಿಸ್‌ಕಿಸ್‌ ಮತ್ತು ರೂಪಗುಣ- ಈ ಪದ್ಯಗಳ ಸಂಕಲನಕ್ಕೆ ರಾಜ್ಯ ಸರಕಾರದ ಬಹುಮಾನ, ಶ್ರೀ ಸಿಂದಗಿ ಪಟ್ಟದ್ದೇವರು ಜೀವನ ಚರಿತ್ರೆಗೆ ಬಿ.ಎಂ.ಶ್ರೀ. ಪ್ರತಿಷ್ಠಾನ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ದೊರೆತಿವೆ. ೨೦೦೦ ದಲ್ಲಿ ಸ್ನೇಹಿತರು ಅರ್ಪಿಸಿದ ಅಭಿನಂದನ ಗ್ರಂಥ. ‘ಹೂವಿನ ಹಂದರ’.ರಾಜ್ಯ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿವೆ. 

 

ಶಂ.ಗು. ಬಿರಾದಾರ

(17 May 1926)