ರೇಣುಕಾ ರಮಾನಂದ ಅವರು ತಲೆಮಾರಿನ ಭರವಸೆಯ ಕವಯತ್ರಿ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ವಂದಿಗೆ ಹುಟ್ಟೂರು. ತಂದೆ ಹೊನ್ನಪ್ಪ ನಾಯಕ ಮತ್ತು ತಾಯಿ ಮಾಣು.
ತವರೂರಿನ ಸರ್ಕಾರಿ ಶಾಲೆಯಲ್ಲಿ ಆರಂಭದ ಅಕ್ಷರಾಭ್ಯಾಸ, ಅಂಕೋಲಾದ ಟೀಚರ್ ಟ್ರೈನಿಂಗ್ ಕಾಲೇಜಿನಲ್ಲಿ ಟಿಸಿಎಚ್ ಪೂರ್ಣಗೊಳಿಸಿರುವ ರೇಣುಕಾ ಅವರು ಕನ್ನಡ ಎಂ.ಎ.ಪದವಿಧರೆ. ರೇಣುಕಾ ಅವರು ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಜೀವನ ಸಂಗಾತಿ ರಮಾನಂದ ಪಿ.ನಾಯಕ್ ರವರು ಕೂಡ ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಮಾನಂದ ದಂಪತಿಯ ಬಾಳು ಬೆಳಗಿಸಲು ಗುಲಾಬಿಗಳಾದ ತ್ರಿಭುವನ ಮತ್ತು ಪ್ರಾರ್ಥನ ಬಂದಿದ್ದಾರೆ.
ವೃತ್ತಿಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕಿ, ಪ್ರವೃತ್ತಿಯಲ್ಲಿ ಕವಯತ್ರಿ- ಲೇಖಕಿ. ಬದುಕಿನ ಅನುಭವ, ಮಾಗಿದ ಭಾವಗಳೇ ಕಾವ್ಯದ ವಸ್ತುಗಳು, ಏಕಾಂಗಿತನವೇ ಕಾವ್ಯಕಟ್ಟುವ ಗೋಪುರ. ಕರಾವಳಿ ಮುಂಜಾವು ಪತ್ರಿಕೆಯಲ್ಲಿ ರೇಣುಕಾ ಅವರ ಪ್ರಬಂಧ-ಲೇಖನಗಳು ಪ್ರಕಟವಾಗಿವೆ. ಕಡಲಿನ ಮೊರೆತ-ಕಡಲಿನ ಮೌನವೆರಡರ ಸಮ್ಮಿಳಿತದಂತ ಅಭಿವ್ಯಕ್ತಿಯ ರೇಣುಕಾ ಅವರು ನನ್ನಿಷ್ಟದಂತೆ ಬರೆಯುತ್ತೇನೆ, ತಿಂಗಳುಗಟ್ಟಲೆ ಮಾಗಿಸಿಯೇ ಕಾವ್ಯಕಟ್ಟುತ್ತೇನೆ ಎನ್ನುತ್ತಾರೆ.
'ಮೀನುಪೇಟೆಯ ತಿರುವು' ಚೊಚ್ಚಲ ಕವನ ಸಂಕಲನ. ರಾಜ್ಯ ಮಟ್ಟದ ಕವಿಗೋಷ್ಠಿಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವ ರೇಣುಕಾ ಅವರಿಗೆ ಸಂಕ್ರಮಣ ಕಾವ್ಯ ಪ್ರಶಸ್ತಿ, ಕಸಾಪ ದತ್ತಿನಿಧಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ದೊರೆತಿವೆ.