ರಾಘವೇಂದ್ರ ಖಾಸನೀಸರು ವಿಜಾಪುರ ಜಿಲ್ಲೆಯ ಇಂಡಿಯವರು. (ಜನನ 02-03-1933) ತಂದೆ ನಾರಾಯಣ ಖಾಸನೀಸ, ತಾಯಿ ಕಮಲಾಬಾಯಿ. ಆರ್ಥರ್ ಕಾನನ್‌ಡೈಲ್, ಶರ್ಲಾಕ್‌ಹೋಮ್ಸ್‌ನ ಪತ್ತೇದಾರಿ ಕಾದಂಬರಿಗಳು ಮತ್ತು ದೆವ್ವದ ಕಥೆಗಳನ್ನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಮಗನಿಗೆ ಹೇಳುತ್ತಿದ್ದರಿಂದ ಸಾಹಿತ್ಯಾಸಕ್ತಿ ಬೆಳೆದಿತ್ತು. ಪ್ರೌಢಶಾಲೆಯವರೆಗೆ ಓದಿದ್ದು ವಿಜಾಪುರದಲ್ಲಿ, ಮಾಧ್ಯಮಿಕ ಶಾಲೆಯಲ್ಲಿದ್ದಾಗ ತಿ.ತಾ.ಶರ್ಮರ ವಿಶ್ವಕರ್ನಾಟಕದಲ್ಲಿ ಇವರ ಕಥೆ ಪ್ರಕಟವಾಗಿತ್ತು. ಧಾರವಾಡದಲ್ಲಿ ಕಾಲೇಜು ಓದುತ್ತಿದ್ದಾಗ ‘ಸ್ವರ್ಗದಬಾಗಿಲು’, ಗೋಕಾಕರ ‘ಸಮರಸವೇ ಜೀವನ’ ಕಾದಂಬರಿಗಳಿಗೆ ವಿಮರ್ಶೆ ಬರೆದಿದ್ದರು.ಬಿ.ಎ. ಪದವಿಯ ನಂತರ ಮುಂಬಯಿಯ ಎನ್‌ಫಿನ್ಸ್‌ಟನ್ ಕಾಲೇಜಿನಿಂದ ಪಡೆದ ಎಂ.ಎ. (ಇಂಗ್ಲೀಷ್) ಪದವಿ ಜೊತೆಗೆ ಮುಂಬಯಿ ವಿಶ್ವವಿದ್ಯಾಲಯದಿಂದ ಗಳಿಸಿದ್ದು ಗ್ರಂಥಾಲಯ ವಿಜ್ಞಾನದಲ್ಲಿ ಡಿಪ್ಲೊಮಾ..ಪುಣೆಯ ಎಸ್.ಪಿ. ಕಾಲೇಜಿನ ಗ್ರಂಥಾಲಯದಲ್ಲಿ ಉದ್ಯೋಗ. ವಲ್ಲಭ ವಿದ್ಯಾನಗರದ ಬಿರ್ಲಾ ಎಂಜನಿಯರಿಂಗ್ ಕಾಲೇಜಿನ ಗ್ರಂಥಾಲಯದಲ್ಲಿ ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಹಾಯಕ ಗ್ರಂಥಪಾಲಕರಾಗಿ ಸೇವೆ ಸಲ್ನೇಲಿಸಿದ್ಮದು 1991ರಲ್ಲಿ ನಿವೃತ್ತರಾದರು.
ಖಾಸನೀಸರ ಮೊದಲ ಕಥಾಸಂಕಲನ ‘ಖಾಸನೀಸರ ಕಥೆಗಳು’, ಕರ್ನಾಟಕ ಸಾಹಿತ್ಯ ಅಕಾಡಮಿಯು ಈ ಕೃತಿಗೆ ಅತ್ಯುತ್ತಮ ಸೃಜನ ಶೀಲ ಕೃತಿ ಎಂದು ಪ್ರಶಸ್ತಿ ನೀಡಿತು. ‘ಬೇಡಿಕೊಂಡವರು’ ಇವರ 2ನೇ ಕಥಾ ಸಂಕಲನ. 1999ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯು ಗೌರವ ಪ್ರಶಸ್ತಿ ನೀಡಿತು. 2010ರಲ್ಲಿ ಧಾರವಾಡದ ಮನೋಹರ ಗ್ರಂಥಮಾಲೆಯು ಖಾಸನೀಸರ ಎಲ್ಲ ಕಥೆಗಳನ್ನು ಸೇರಿಸಿ ‘ಸಮಗ್ರ ಕಥೆಗಳನ್ನು’ ಪ್ರಕಟಿಸಿದೆ. ಖಾಸನೀಸರ ಅನೇಕ ಕಥೆಗಳು ಇತರ ಭಾಷೆಗಳಿಗೂ ಅನುವಾದಗೊಂಡಿದೆ. ಅವುಗಳಲ್ಲಿ ‘ತಬ್ಬಲಿಗಳು’ ಎಂಬ ಕಥೆಯು ORPHANS ಎಂಬ ಹೆಸರಿನಿಂದ ಡಾ. ವಿಕ್ರಮರಾಜ ಅರಸ್ ಅವರು ಸಂಪಾದಿಸಿರುವ ‘AN ANTHOLOGY OF KANNADA SHORT STORIES’ ಸಂಕಲನದಲ್ಲಿ ಸೇರಿದೆ
ಈ ಕಥೆಯು ಎಸ್.ದಿವಾಕರ್ ಸಂಪಾದಿಸಿರುವ ಶತಮಾನದ ಸಣ್ಣಕಥೆಗಳು ಸಂಗ್ರಹದಲ್ಲಿಯೂ ಸೇರಿದೆ. ‘ಹೀಗೂ ಇರಬಹುದು!’ ಎಂಬ ಕಥೆಯು ದೂರದರ್ಶನದ ಕಥೆಗಾರ ಮಾಲಿಕೆಯಲ್ಲಿ ಪ್ರಸಾರಗೊಂಡಿದೆ. ರಾಘವೇಂದ್ರ ಖಾಸನೀಸರು ನಿವೃತ್ತಿಯಾದ ಮರುವರ್ಷವೇ ಪಾರ್ಕಿನ್‌ಸನ್ ಕಾಯಿಲೆಗೆ ತುತ್ತಾಗಿ 2007ರ ಮಾರ್ಚ್ 19 ರಂದು ನಿಧನರಾದರು.