ಕನ್ನಡದ ಹಿರಿಯ ಲೇಖಕಿಯರಲ್ಲಿ ಪ್ರೇಮಾ ಭಟ್ ಅವರು ಪ್ರಮುಖರು. ಅವರು ರಚಿಸಿದ ಒಲಿದು ಬಂದವನು ಕಾದಂಬರಿ 'ಆಡಿ ಬಾ ಅರಗಿಣಿ' ಹೆಸರಿನಲ್ಲಿ ಸುಜಾತ ಕಾದಂಬರಿ 'ಬೆಕ್ಕಿನ ಕಣ್ಣು' ಹೆಸರಿನಲ್ಲಿ ಚಲನಚಿತ್ರವಾಗಿವೆ. ತಮ್ಮ ಅನುಭವಗಳನ್ನು ಕಾದಂಬರಿಗಳಲ್ಲಿ ಚಿತ್ರಿಸುತ್ತಿದ್ದ ಅವರು 1941 ಸೆಪ್ಟಂಬರ್ 22 ರಂದು ಉಡುಪಿ ಜಿಲ್ಲೆಯ ಹೆರ್ಗ ಗ್ಯಾಮದಲ್ಲಿ ಜನಿಸಿದರು. “ಅವಳ ಬಾಳು, ಕುಂಕುಮ ಶೋಭಿನಿ, ಮಲ್ಲಿಗೆ ಮುಡಿಗೇರಿತು, ಹೂಬಿಸಿಲು, ಭ್ರಮಣ, ಪಲ್ಲಟ, ನೇಪಥ್ಯ, ಹಸಿರು ಹೊನಲು, ಮಜಲುಗಳು” ಮುಂತಾದ ಇತ್ಯಾದಿ 45ಕ್ಕಿಂತ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಅವರ 'ನಂದಿನಿ' ಮತ್ತು ಆಯ್ದಕ್ಕಿ ಲಕ್ಕಮ್ಮ' ಕೃತಿಗಳು ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿರುವುದು ಅವರ ಪ್ರೌಢಾಬರಹಕ್ಕೆ ಉದಾಹರಣೆಯಾಗಿದೆ.
'”ಮನಮೆಚ್ಚಿದವಳು, ಲಿಪ್ ಸ್ಟಿಕ್ ಹುಡುಗಿ, ತಲೆ ತಿರುಕರು, ಹೊಸ ಕಡತ, ಸಿಡಿಮದ್ದು, ಗುಮಾನಿ, ಮಡಿ ಮುತ್ತೈದೆ, ಅಕ್ಕಯ್ಯ, ಅಕ್ಷತೆ, ಪಂಚಾಮೃತ, ಪ್ರೇಮಾ ಭಟ್ ಸಣ್ಣಕತೆಗಳು, ಹಗರಣ, ಕಥಾವರ್ಷ” ಹೀಗೆ ಹಲವಾರು ಕಥಾ ಸಂಕಲನವನ್ನು ಹೊರತಂದಿದ್ದಾರೆ. 'ಮಾತೃಶ್ರೀ ರತ್ನಮ್ಮ ಹೆಗ್ಗಡೆ ಪುರಸ್ಕಾರ', 'ಮಿಣುಕು ಹುಳು' ಕೃತಿಗೆ, ಕನ್ನಡ ಸಾಹಿತ್ಯ ಪರಿಷತ್ತಿನ “ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ. “ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ”, ಕರ್ನಾಟಕ ಲೇಖಕಿಯರ ಸಂಘದ 'ಅನುಪಮಾ ಪ್ರಶಸ್ತಿ', “ಆರ್ಯಭಟ ಪ್ರಶಸ್ತಿ', “ಆಳ್ವಾಸ್ ನುಡಿಸಿರಿ ಪ್ರಶಸ್ತಿ”, ರಾಮಕ್ಕ ಪದ್ಯಕ್ಕೆ ಪ್ರಶಸ್ತಿ, “ಅಳಸಿಂಗ ಪ್ರಶಸ್ತಿ', ದಕ್ಷಿಣ ಕನ್ನಡ ಕನ್ನಡಿಗರ ವೇದಿಕೆಯಿಂದ 'ಭಾರ್ಗವ ಪ್ರಶಸ್ತಿ', ಶ್ರೀಮತಿ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಟ್ರಸ್ಟ್, ಮಂಡ್ಯ ಇವರಿಂದ `ಸೀತಾಸುತ ಸಾಹಿತ್ಯ ಪ್ರಶಸ್ತಿ' ಮುಂತಾದ ಪ್ರಶಸ್ತಿಗಳು ಅವರನ್ನರಸಿವೆ. 8ನೇ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಉಡುಪಿ ಅಧ್ಯಕ್ಷ ಸ್ಥಾನ, ಚಲನಚಿತ್ರ ಆಯ್ಕೆ ಸಮಿತಿ ಸದಸ್ಯೆ ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷೆ, ದಾನ ಚಿಂತಾಮಣಿ ಅತ್ತಿಮಬ್ಬೆ ಆಯ್ಕೆ ಸಮಿತಿ ಸದಸ್ಯೆಯಾಗಿದ್ದರು.