ಪಂಡಿತ್ ತಾರಾನಾಥರು (ಜನನ: 1891ರ ಜೂನ್ 5ರಂದು ) ಮಂಗಳೂರಿನವರು. ವೈದ್ಯರು, ಯೋಗ ಆಯುರ್ವೇದ ತಜ್ಞರು, ಸಮಾಜ ಸುಧಾರಕರು. ಹೈದ್ರಾಬಾದಿನಲ್ಲಿ ಹೈಸ್ಕೂಲ್ ಹಾಗೂ ಕಾಲೇಜು ಶಿಕ್ಷಣ ನಂತರ ವೈದ್ಯಕೀಯ ಕಾಲೇಜು ಸೇರಿದರು. ಅವರ ಅಸಾಧಾರಣ ಪ್ರತಿಭೆಯು ಅವರನ್ನು ಜನರಿಂದ ದೂರ ಇರಿಸುತ್ತಲೇ ಇತ್ತು. ದೇಹಶಾಸ್ತ್ರದ ಸಹಾಯಕ ಅಧ್ಯಾಪಕರಾಗಿದ್ದರು. ತಾರಾನಾಥರನ್ನು ಬೀದರಿಗೆ ವರ್ಗಾವಾಯಿತು. ಬೀದರಿಗೆ ಆಗಮಿಸಿದ್ದ ನೇಪಾಳದ ಯೋಗಿ ಉತ್ತಮದಾಸ ಪರಮಹಂಸರು ಮತ್ತು ಯೋಗೀಶ್ವರಾನಂದರಿಂದ ಯೋಗ ಮತ್ತು ಆಯುರ್ವೇದದ ದೀಕ್ಷೆ ಪಡೆದರು. ಆಧ್ಯಾತ್ಮಿಕ ರಹಸ್ಯ ಅನುಭವಗಳನ್ನು ಪಡೆದರು. ದೈಹಿಕ ಕಾಹಿಲೆಗಳಿಗೆ ಭೌತಿಕದ ಬದಲು ಮಾನಸಿಕ ಚಿಕಿತ್ಸೆ ಹೆಚ್ಚು ಪ್ರಯೋಜನಕಾರಿ ಎಂದು ನಂಬಿದ್ದರು. ಸರ್ವರನ್ನೂ ಸಮಾನವಾಗಿ ಕಾನುತ್ತಿದ್ದರು. ಹೀಗಾಗಿ, ಮೂಲಭೂತವಾದಿಗಳು ಅವರನ್ನು ಕೊಲ್ಲುವ ಪ್ರಯತ್ನವೂ ಮಾಡಿದ್ದರು.
ಸರ್ಕಾರಿ ಸೇವೆಗೆ ರಾಜಿನಾಮೆ ನೀಡಿ ರಾಯಚೂರಿನಲ್ಲಿ ’ಮದರಸಾ ಹಿ ಹಮ್ದರ್ದ್’ ಶಾಲೆ ಸ್ಥಾಪಿಸಿದರು. ಬುದ್ಧಿಯನ್ನಷ್ಟೇ ಬೆಳೆಸಿದರೆ ಸಾಲದು, ವಿದ್ಯಾರ್ಥಿಗಳಲ್ಲಿ ನೈತಿಕ ಅರಿವು ಮತ್ತು ಸದ್ಗುಣಗಳನ್ನು ಬೆಳೆಸಬೇಕು ಎಂಬ ಉದ್ದೇಶವಿತ್ತು. ಗಣಿತವನ್ನು ಸಂಗೀತದ ಮೂಲಕ ಕಲಿಸಲು ಯತ್ನಿಸಿದರು. ಹೈದರಾಬಾದ್ ನಿಜಾಮರ ನಿರಂಕುಶ ಆಡಳಿತ ಪ್ರತಿಭಟಿಸಿ ಲೇಖನಗಳನ್ನು ಬರೆದರು. ಅವರ ಮೇಲೆ ರಾಜದ್ರೋಹದ ಆರೋಪವಿದ್ದು, ಗಡಿಪಾರು ಮಾಡಲಾಯಿತು. ಮಧ್ಯರಾತ್ರಿಯಲ್ಲಿ ತುಂಗಭದ್ರಾ ನದಿ ದಾಟಿ ಬ್ರಿಟಿಷ್ ಸರಕಾರದ ಗಡಿ ಪ್ರವೇಶಿಸಿದರು. ಆಲ್ಲಿ ’ಪ್ರೇಮಾಯತನ’ ಎಂಬ ಆಶ್ರಮ ಸ್ಥಾಪಿಸಿ , ಆರೋಗ್ಯೋಪಚಾರದ ಆಯುರ್ವೇದದ ಸಿದ್ಧಾಂತ ಮತ್ತು ಆಚರಣೆಗಳನ್ನು ಪ್ರಚಾರ ಮಾಡತೊಡಗಿದರು.
ಈ ಆಶ್ರಮದಲ್ಲಿ (1933ರಲ್ಲಿ) ಪಿತೂರಿ ನಡೆಯುತ್ತಿದೆ ಎಂದು ಬ್ರಿಟಿಷ್ ಸರ್ಕಾರ ದಾಲಿ ಮಾಡಿತ್ತು. ಗಾಂಧೀಜಿಯವರು ಆರೋಗ್ಯ ಸುಧಾರಣೆಗೆಂದು ನಂದಿ ಬೆಟ್ಟಕ್ಕೆ (1927ರಲ್ಲಿ ) ಬಂದಾಗ ತಾರಾನಾಥರು ಉಪಚರಿಸಿದರು. ಡಾ. ರಾಧಾಕೃಷ್ಣನ್ ಸಲಹೆಯಂತೆ ‘ದೀನಬಂಧು’ ನಾಟಕವನ್ನು ಹಿಂದಿಯಲ್ಲಿ ಬರೆದು ಪ್ರದರ್ಶಿಸಿ, ಆ ಹಣವನ್ನು ಗಾಂಧೀಜಿಗೆ ನೀಡಿದರು. ಸ್ವತಃ ತಾರಾನಾಥರೇ ಕಬೀರನ ಪಾತ್ರ ಮಾಡಿದ್ದರು. ಮೋಹನಾಸ್ತ್ರ, ಇನ್ಸಾಫ್ ಇವರ ಇತರ ನಾಟಕಗಳು. ತಾರಾನಾಥರು ರಾಯಚೂರಿನಲ್ಲಿ ನಡೆದ (1937) ಅಖಿಲ ಭಾರತ ಆಯುರ್ವೇದ ಮತ್ತು ಯುನಾನಿ ಅನುವಂಶಿಕ ವೈದ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 40ನೆಯ ವಯಸ್ಸಿನವರೆಗೂ ಬ್ರಹ್ಮಚಾರಿಯಾಗಿದ್ದು, ಮದರಾಸಿನಿಂದ ರೋಗಿಯಾಗಿ ಬಂದಿದ್ದ ಸುಮತಿಬಾಯಿ ಎಂಬುವವರನ್ನು ಗುಣಪಡಿಸಿ, ಮುಂದೆ ಅವರನ್ನು ಮದುವೆಯಾದರು. ಪುತ್ರ ಸಂಗೀತಲೋಕದ ಸರೋದ್ ವಾದಕ ರಾಜೀವ್ ತಾರಾನಾಥರು
1942 ಅಕ್ಟೋಬರ್ 30ರಂದು ತಾರಾನಾಥರು ತಮ್ಮ 51ನೆಯ ವಯಸ್ಸಿನಲ್ಲಿ ನಿಧನರಾದರು. ರಾಯಚೂರಿನಲ್ಲಿಯ ಪಂಡಿತ್ ತಾರಾನಾಥ ಶಿಕ್ಷಣ ಸಮಿತಿಯು ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿದೆ. ಪುತ್ರ ಪಂಡಿತ್ ರಾಜೀವ ತಾರಾನಾಥರ ನೇತೃತ್ವದಲ್ಲಿ ದತ್ತಿ ‘ಇಂಪು’ ಹೆಸರಿನಿಂದ ಪಂಡಿತ್ ತಾರಾನಾಥ ಸ್ಮರಣ ಸಂಗೀತ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.