ಕನ್ನಡದ ಪ್ರಮುಖ ಬರಹಗಾರ್ತಿ, ಸಂಶೋಧಕಿ, ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಮಹಿಳಾ ಪ್ರಕಾಶಕಿ ಡಾ. ನಿರುಪಮಾ ಅವರು 1931 ಸೆಪ್ಟಂಬರ್ 30 ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯಲ್ಲಿ ಜನಿಸಿದರು. ಅವರ ಮೂಲ ಹೆಸರು ಪದ್ಮಾ ಆರ್. ರಾವ್ ಎಂದು. ನಿರುಪಮಾ ಅವರ ಪ್ರಾರಂಭಿಕ ಶಿಕ್ಷಣವೆಲ್ಲ ತೆಲುಗಿನಲ್ಲಿ ನಡೆಯಿತು. ಮನೆಯಲ್ಲಿ ಕನ್ನಡ ಪಾಠವೂ ನಡೆಯುತ್ತಿತ್ತು. ಎಸ್.ಎಸ್.ಎಲ್.ಸಿ. ಉತ್ತೀರ್ಣರಾದದ್ದು ಬಳ್ಳಾರಿಯ ಪ್ರೌಢಶಾಲೆಯಿಂದ. ಮದುವೆಯ ನಂತರ ಮೂವರು ಮಕ್ಕಳು ನೆಲೆಗೊಂಡ ನಂತರ ಎರಡು ಪಿಎಚ್.ಡಿ. ಪದವಿ ಪಡೆದ ವಿಶಿಷ್ಟ ಪ್ರತಿಭೆ ಇವರದ್ದು. ತಂದೆ ತಾಯಿಯರ ಕುಟುಂಬದಲ್ಲೂ ವಿದ್ವತ್ಪೂರ್ಣ ವಾತಾವರಣ ನೆಲೆಗೊಂಡಿದ್ದು ನಿರಂತರವಾಗಿ ಮನೆಯಲ್ಲಿ ರಾಮಾಯಣ, ಮಹಾಭಾರತ, ಭಾಗವತದಂತಹ ಪ್ರವಚನಗಳು ನಡೆಯುತ್ತಿದ್ದವು. ಹೀಗೆ ನಿರುಪಮಾ ಅವರು ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದವರು. 1964ರಲ್ಲಿ ಎರಡು ಚಿಕ್ಕ ನಾಟಕಗಳನ್ನು ರಚಿಸಿ ತಾವೇ ಪ್ರಕಟಿಸಿದರು. ನಂತರ ಬರೆದದ್ದು ‘ಅಧಿಕಾರಿಗಳ ಅವಾಂತ್ರ’ ಎಂಬ ನೂರ ಇಪ್ಪತ್ತು ಪುಟದ ನಾಟಕ.
ಹೀಗೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ನಿರುಪಮಾ ಅವರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ‘ಪರಿತ್ಯಕ್ತೆ’ 1969ರಲ್ಲಿ ಪ್ರಕಟಗೊಂಡಿತು. ಮುಂದೆ ಬಂದ ಅವರ ಕಾದಂಬರಿಗಳು ಅಮೃತ ಕಳಶ, ಭುವನ ವಿಜಯ, ದೇವರೇ ಸಾಕ್ಷಿ, ಇಂದಿರೆ, ನೃತ್ಯ ಸಾಮ್ರಾಜ್ಞಿ, ಪ್ರಣಯಿನಿ, ಜೀವನ ಸವಂತಿ ಮುಂತಾದವು. ಇದಲ್ಲದೆ ತುಂಗಭದ್ರೆಯ ಮಡಿಲಲ್ಲಿ, ನಾಳೆ, ಬಾವುಟ ಅತ್ತಿತು, ಆ ಹುಡುಗಿ, ಶಿಲಾರವ, ಕೆರೆ, ತಿಂಮನ ಪ್ರೇಮಾಯಣ ಮುಂತಾದ 7 ಕಥಾ ಸಂಕಲನಗಳೂ ಪ್ರಕಟವಾದವು. ಡಾ. ನಿರುಪಮಾ ಅವರು ಬಂಗಾಲಿ ಕಲಿತದ್ದರ ಫಲವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾದೇವಿಯವರ ಹಸಾರ್, ಅಗ್ನಿಗರ್ಭ್, ಶ್ರೀಶ್ರೀ ಗಣೇಶ ಮಹಿಮೆ - ಈ ಮೂರು ಕಾದಂಬರಿಗಳನ್ನು ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಅಷ್ಟೇ ಅಲ್ಲದೆ ಮಹಿಳಾ ಸಾಹಿತ್ಯದಲ್ಲೂ ಕೃಷಿ ಮಾಡಿದ್ದಾರೆ. ’ಮಹಿಳೆ ಮತ್ತು ವಿವಾಹ, ಕಾನೂನಿನ ಕಕ್ಷೆಯಲ್ಲಿ ರಕ್ಷೆ, ಧರ್ಮಶಾಸ್ತ್ರಗಳು - ಸ್ತ್ರೀ ಹಾಗೂ ಶೋಷಣೆ, ಆರೋಗ್ಯವೇ ಮಹಾ ಭಾಗ್ಯ, ವಿಶ್ವದಲ್ಲಿ ಮಹಿಳಾ, ಮಹಿಳೆ ಮತ್ತು ಮಿತವ್ಯಯ, ಮಹಿಳೆ ಮತ್ತು ಕುಟುಂಬದ ಮುಂಗಡ ಪತ್ರ, ವಿಶ್ವದ ಮಹಿಳೆ ಅಂದು-ಇಂದು’ ಮುಂತಾದ ಮಹಿಳಾ ಸಾಹಿತ್ಯವನ್ನು ರಚಿಸಿದ್ದಾರೆ.
“ಕಸ್ತೂರಿ ಬಾ, ಸಂಕ್ಷಿಪ್ತ ಮಹಾಭಾರತ, ಮಕ್ಕಳಿಗಾಗಿ ಶ್ರೀಕೃಷ್ಣನ ಕಥೆಗಳು, ನಮ್ಮ ಬಾವುಟದ ಕಥೆ, ಏಷಿಯಾಡ್ ಪಂದ್ಯಗಳು, ರಾಷ್ಟಗೌರವ, ಮರ್ಯಾದೆ ರಾಮಣ್ಣನ ಕಥೆಗಳು, ಅಲ್ಲಾವುದ್ದೀನನ ಅದ್ಭುತ ದೀಪ, ಓದುವ ಆಲಯ ಗ್ರಂಥಾಲಯ, ಬೆಲೂನಿನಲ್ಲಿ ಭೂಮಿಯ ಸುತ್ತ, ಗೆಲಿಲಿಯೋ, ಪ್ರಸಿದ್ದ ವಿಜ್ಞಾನಿಗಳು, ಸರ್. ಸಿ.ವಿ. ರಾಮನ್, ಮನೆಗೊಂದು ಗ್ರಂಥ ಭಂಡಾರ” ಇತ್ಯಾದಿ ಅವರ ಮಕ್ಕಳ ಸಾಹಿತ್ಯ ಕೃತಿಗಳು. ನೈನಿತಾಲ್ನಲ್ಲಿ ನಡೆದ ಅಖಿಲ ಭಾರತ ಲೇಖಕಿಯರ ಸಮ್ಮೇಳನದಲ್ಲಿ ದಕ್ಷಿಣದ ಉತ್ತಮ ಲೇಖಕಿ ಸನ್ಮಾನ. ಯೂನಿಸೆಫ್ನ ಅಂತರರಾಷ್ಟ್ರೀಯ ಪ್ರಶಸ್ತಿ ಮಕ್ಕಳ ಸಾಹಿತ್ಯಕ್ಕೆ ೧೯೮೯, ಶಾಶ್ವತಿ ಸಂಸ್ಥೆಯಿಂದ ಸದೋದಿತ ಪ್ರಶಸ್ತಿ ೧೯೯೭, ಹರಿದಾಸ ಸಾಹಿತ್ಯ ಶಿರೋಮಣಿ ಬಿರುದು, ಸುವರ್ಣ ಸ್ವಾತಂತ್ರ್ಯೋತ್ಸವ ಬಿರುದು ಸನ್ಮಾನ, ದಕ್ಷಿಣ ಭಾರತದ ಅತ್ಯುತ್ತಮ ಪ್ರಕಾಶಕಿ ಪ್ರಶಸ್ತಿ, ಮಿಥಿಕ್ ಸೊಸೈಟಿಯಿಂದ ಸಾಹಿತ್ಯ ವಿದುಷಿ ಬಿರುದು, ಸನ್ಮಾನ, ಬಿ.ಎಸ್. ಚಂದ್ರಕಲಾ ಸ್ವರಲಿಪಿ ಪ್ರತಿಷ್ಠಾನದ 'ಲಿಪಿಪ್ರಾಜ್ಞೆ' ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಬಿ. ಸರೋಜಾದೇವಿ ಪ್ರಶಸ್ತಿಗಳು ಅವರ ಮುಡಿಗೇರಿವೆ. ಮಾಜಿ ಸದಸ್ಯೆ, ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ, ಕರ್ನಾಟಕ ಹರಿದಾಸ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷೆ, ಲೇಖಕಿಯರ ಸಹಕಾರಿ ಪ್ರಕಾಶನದ ಅಧ್ಯಕ್ಷೆ, ಇತರ ಅನೇಕ ಸಂಘ ಸಂಸ್ಥೆಗಳ ಕಾರ್ಯಕಾರಿ ಸಮಿತಿಗಳಲ್ಲಿ, ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಸಲಹೆಗಾರ್ತಿ, ದಾನ ಚಿಂತಾಮಣಿ ಪ್ರಶಸ್ತಿ ಸದಸ್ಯೆಯಾಗಿದ್ದರು