ನಾಗೇಶ್ ತಳವಾರ ಬಿಜಾಪುರ (ಈಗಿನ ವಿಜಯಪುರ) ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ 16-04-1987 ರಲ್ಲಿ ಜನಿಸಿದರು. ನಾಗೇಶ್ ಶಂಕ್ರಮ್ಮಾ ಮಾದೇವ ತಳವಾರ ಇವರ ಪೂರ್ತಿ ಹೆಸರು. ಬಾಲವಾಡಿಯಿಂದ ಹೈಸ್ಕೂಲ್ ವರೆಗಿನ ಓದು ಸಿಂದಗಿಯಲ್ಲಿ ಮುಗಿಸಿದ್ರು. ಮುಂದಿನ ಓದು ವಿದ್ಯಾಕಾಶಿ ಧಾರವಾಡದಲ್ಲಿ ಆರಂಭಿಸಿ ಅಲ್ಲಿಯೇ ಎಂ.ಎ (ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ) ಮುಗಿಸಿದ್ದಾರೆ.
ಬರವಣಿಗೆ, ನಾಟಕ, ಡ್ಯಾನ್ಸ್ ಅನ್ನೋದು ಇವರಿಗೆ ಧಾರವಾಡ ನೆಲದ ಮಣ್ಣಿನಿಂದ ಮೈ ಮನಕ್ಕೆ ಮೆತ್ತಿಕೊಂಡಿದೆ. ನಾಲ್ಕೈದು ವರ್ಷಗಳ ಕಾಲ ಡ್ಯಾನ್ಸ್ ನಾಟಕ ಅಂತ ಅಲೆದಾಡಿದ್ದಾರೆ. ಹೀಗಾಗಿ ಕಾಲೇಜು ಜೀವನಕ್ಕೆ ಒಂದಿಷ್ಟು ಚಕ್ಕರ್ ಹಾಕಿದ್ರು. ಇದೆಲ್ಲಾ ಆದ್ಮೇಲೆ ಎಂ.ಎ.ಮಾಡಿದ್ರು. ಇದರ ನಡುವೆ ತೋಚಿದ್ದು ಗೀಚಿದ್ದು. 2013 ರಲ್ಲಿ ಟಿವಿ9ನಲ್ಲಿ ವೃತ್ತಿ ಬದುಕು ಶುರು ಮಾಡಿದ ಅವರು ಕೆಲಸದ ಕಾರಣಕ್ಕಾಗಿ ಬೆಂಗಳೂರು ಅನ್ನೋ ಮಹಾ ನಗರಕ್ಕೆ ಬಂದಿಳಿದ್ರು.
ಬೆಂಗಳೂರಿನ ಪ್ರಮುಖ ಕಾಲೇಜುಗಳಲ್ಲಿ ಒಂದಾದ ಎನ್.ಎಂ.ವಿ.ಆರ್.ಕೆ ಕಾಲೇಜಿನ ವಿದ್ಯಾರ್ಥಿಗಳಿಗೆ ನಾಟಕ ನಿರ್ದೇಶನ ಮಾಡಿದ್ದಾರೆ. ಒಂದು ವರ್ಷ ಹತ್ತು ತಿಂಗಳು ಟಿ.ವಿ9ನಲ್ಲಿ ಕೆಲಸ ಮಾಡಿದ್ರು. ಬಳಿಕ 2015ರಲ್ಲಿ ಬಿಟಿವಿ ಸೇರಿದ ಇವರು ಕಾರ್ಯಕ್ರಮ ನಿರ್ಮಾಪಕರಾಗಿ ಕೆಲ ಕಾಲ ಕಾರ್ಯನಿರ್ವಹಿಸಿ ಸದ್ಯ ಅಂತರ್ಜಾಲ ಪತ್ರಿಕೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಮೊದಲ ಕೃತಿ ‘ಅವ್ವ ಮತ್ತು ಸೈಕಲ್’, ಈ ಕೃತಿಗೆ 2017ರಲ್ಲಿ ಕಲಬುರಗಿಯ ಪ್ರೊ.ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಶರಣ ಉರಿಲಿಂಗಪೆದ್ದಿ ಪುಸ್ತಕ ಬಹುಮಾನ ಬಂದಿದೆ. ‘ದುಂದುಗ’ ಇವರ ಎರಡನೇ ಕೃತಿ.