ಬರಹಗಾರರಾದ ಡಾ. ಮುರ್ತುಜಾ ಬ. ಒಂಟಿ ಅವರು 1970 ಜೂನ್ 1ರಂದು ಜನಿಸಿದರು. ಬಾಗಲಕೋಟೆ ಜಿಲ್ಲೆಯ ಹುನುಗುಂದ ಇವರ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಹುನಗುಂದ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಹಿತ್ಯ ರಚನೆ ಇವರ ಪ್ರವೃತ್ತಿ. ಕಾಲೇಜು ದಿನಗಳಿಂದಲೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ಹುನುಗುಂದ ಮಹಾವಿದ್ಯಾಲಯದಲ್ಲಿ ‘ಕನ್ನಡ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಬಾಗಲಕೋಟೆ ಜಿಲ್ಲಾ ವಚನ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಶ್ರೀ ಶಾರದಾ ಸಂಗೀತ ನಾಟಕ ಮಂಡಳಿ ಗೋಕಾಕ, ವ್ಯಕ್ತಿ-ವಿಮರ್ಶೆ, ಅನುಭಾವ ದರ್ಶನ, ಪ್ರಮೀಳಮ್ಮ ಗುಡೂರು. ಸಂಪಾದಿತ: ನಿನಾದ, ಪ್ರತಿಭಾವತರಣ, ಶಿಕ್ಷಣ ಸಿಂಧೂರ, ಕಾಯಕಯೋಗಿ, ಉರಿಯುಂಡ ಕರ್ಪೂರ, ಅಭಿವ್ಯಕ್ತಿ, ನಿರಾಡಂಬರ, ಸಾಹಿತ್ಯ ಸಂಗಮ-4, ಶಾಸ್ತ್ರೀಯ ಭಾರತಿ-1 ಮುಂತಾದವು ಇವರು ರಚಿಸಿದ ಪ್ರಮುಖ ಕೃತಿಗಳು.
ಇವರಿಗೆ ಬಸವಗುರು ಕಾರುಣ್ಯ ಹಾಗೂ ಬಾಗಲಕೋಟೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ದಾವಣಗೆರೆಯ ಸಾಂಸ್ಕೃತಿಕ ಕಲಾ ಅಕಾಡೆಮಿಯ ಬಸವಶ್ರೀ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ದರ್ಶನ ಸೇವಾಭಿವೃದ್ಧಿ ಸಂಸ್ಥೆಯ ಜ್ಞಾನ ಭೂಷಣ ಪ್ರಶಸ್ತಿ, ಸಾಧನಾಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.