About the Author

ಡಾ. ಮೌನೇಶ್ವರ ಶ್ರೀನಿವಾಸರಾವ್‍ರವರು ಗುಲ್ಬರ್ಗಾ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮಟ್ಟದಲ್ಲಿ ರ್ಯಾಂಕ್‍ನ್ನು ಪಡೆದ ವಿದ್ಯಾರ್ಥಿಯಾಗಿದ್ದು, “ಭಾರತದ ಸಂಮ್ಮಿಶ್ರ ರಾಜಕೀಯದಲ್ಲಿ ಪ್ರಾದೇಶಿಕ ಪಕ್ಷಗಳ ಪಾತ್ರ: ಒಂದು ವಿಶೇಷ ಅಧ್ಯಯನವಾಗಿ ತಮಿಳು ನಾಡು” ಎಂಬ ಪ್ರಚಲಿತ ರಾಜಕಾರಣಕ್ಕೆ ಅವಶ್ಯವಾಗಿರುವ ಶೀರ್ಷಿಕೆಯ ಮೇಲೆ ಪ್ರೌಢ ಪ್ರಬಂಧವನ್ನು ಮಂಡಿಸಿ ಗುಲ್ಬರ್ಗಾ ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿಯನ್ನು ಪಡೆದಿರುತ್ತಾರೆ.

ಡಾ. ಮೌನೇಶ್ವರ ಶ್ರೀನಿವಾಸರಾವ್‍ರವರು ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಹಂತದ ವಿದ್ಯಾರ್ಥಿಗಳಿಗೆ ಏಳು ವರ್ಷಗಳಿಂದ ರಾಜ್ಯಶಾಸ್ತ್ರ ವಿಷಯವನ್ನು ಬೋಧಿಸುತ್ತಿದ್ದಾರೆ. ಅವರು ತಮ್ಮ ಪಿಹೆಚ್.ಡಿ. ಪದವಿಯ ಪ್ರೌಢ ಪ್ರಬಂಧವನ್ನು ಪುಸ್ತಕವನ್ನಾಗಿ ಪ್ರಕಟಿಸುವುದರೊಂದಿಗೆ, ಅನೇಕ ರಾಷ್ಟ್ರೀಯ ಸಮ್ಮೇಳನಗಳ ನಡಾವಳಿಗಳನ್ನು ಹಾಗೂ 31 ಲೇಖನಗಳನ್ನು ಪ್ರಕಟಿಸಿದ್ದಾರೆ.  ಹಲವಾರು ರಾಜ್ಯ, ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಸಮ್ಮೇಳನ ಹಾಗೂ ಕಾರ್ಯಗಾರಗಳಲ್ಲಿ ಅನೇಕ ಸಂಶೋಧನಾ ಪತ್ರಿಕೆಗಳನ್ನು ಮಂಡಿಸಿದ್ದಾರೆ. ಅವರು ಐ.ಸಿ.ಎಸ್.ಎಸ್.ಆರ್., ನವದೆಹಲಿಯಿಂದ ಅನುದಾನ ಪಡೆದು “ಭಾರತದಲ್ಲಿನ ನೌಕರಶಾಹಿ ಹಾಗೂ ಅಭಿವೃದ್ಧಿ ಆಡಳಿತ: ಕರ್ನಾಟಕದ ಒಂದು ವಿಶೇಷ ಅಧ್ಯಯನ” ಎಂಬ ಪ್ರೌಢ ಸಂಶೋಧನಾ ಯೋಜನೆಯನ್ನು ಹಾಗೂ ಯು.ಜಿ.ಸಿ. ಬೆಂಗಳೂರು ಇವರಿಂದ ಅನುದಾನ ಪಡೆದು “ಗಾಂಧೀಜಿಯವರ ತತ್ವಶಾಸ್ತ್ರದ ಪ್ರಸ್ತುತತೆ ಹಾಗೂ ಭಾರತದ ಪ್ರಜಾಪ್ರಭುತ್ವ: ಒಂದು ತೌಲನಿಕ ಅಧ್ಯಯನ” ಎಂಬ ಕಿರು ಸಂಶೋಧನಾ ಯೋಜನೆಯನ್ನು ಕೈಗೊಂಡು ಯಶಸ್ವಿಯಾಗಿ ಮುಗಿಸಿರುತ್ತಾರೆ.

ಅವರು ಹಲವಾರು ರಾಜ್ಯ, ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳು, ಸಮ್ಮೇಳನಗಳು ಹಾಗೂ ಕಾರ್ಯಗಾರಗಳು, ವಿಶೇಷ ಉಪನ್ಯಾಸಗಳನ್ನು, ವಿದ್ಯಾರ್ಥಿಗಳಿಗಾಗಿ ಸಂಸತ್ತಿನ ಅಣಕು ಪ್ರದರ್ಶನ ಹಾಗೂ ತುಮಕೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅಂತರ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಚರ್ಚಾ ಸ್ಪರ್ಧೆಯನ್ನು ಆಯೋಜಿಸಿರುತ್ತಾರೆ.  ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಇತರೆ ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಯು.ಜಿ.ಸಿ. ಪ್ರಾಯೋಜಿತ ಪರಿಹಾರ ಬೋಧನಾ ತರಭೇತಿಯ ಸಂಯೋಜಕರಾಗಿ, ತುಮಕೂರು ವಿಶ್ವವಿದ್ಯಾನಿಲಯದ ಪಿಹೆಚ್.ಡಿ. ವಿಭಾಗದ ವಿಶೇಷಾಧಿಕಾರಿಯಾಗಿ ಮತ್ತು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಆಡಳಿತಾತ್ಮಕ ಸೇವೆಯನ್ನು ಸಲ್ಲಿಸಿರುತ್ತಾರೆ.

 

ಮೌನೇಶ್ವರ ಶ್ರೀನಿವಾಸರಾವ್‍