ಮಾರುತಿ ದೊಡ್ಡಕೋಡಿಹಳ್ಳಿ ಅವರು ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲೂಕು ಹಳೇಬೀಡು ಹೋಬಳಿಯವರು. ತಾಯಿ ಪುಟ್ಟಮ್ಮ ತಂದೆ ಬರ್ಮೊಜಿರಾವ್. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಪ್ರಾರ್ಥಮಿಕ ಶಾಲಾ ಶಿಕ್ಷಕರಾಗಿ ಆಯ್ಕೆಯಾಗಿ ಬೇಲೂರು ತಾಲೂಕಿನ ಸ.ಕಿ.ಪ್ರಾ.ಶಾಲೆ ಅಗ್ಗಡಲು, ಸ.ಕಿ.ಪ್ರಾ.ಶಾಲೆ ಮಲ್ಲನಹಳ್ಳಿ, ಸ.ಹಿ.ಪ್ರಾ.ಬಾಲಕಿಯರ ಶಾಲೆ ಬೇಲೂರು ಇಲ್ಲಿ 15 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಅವರು ಅನೇಕ ಕವನಗಳನ್ನು ರಚಿಸಿದ್ದಾರೆ. ಇವರ ಕವನಗಳು ಜಿಲ್ಲೆಯ ಹಲವಾರು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಜನಮನ್ನಣೆ ಗಳಿಸಿವೆ. ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯವಾಚಿಸಿ ಓದುಗರ ಗಮನ ಸೆಳೆದಿದ್ದಾರೆ. 2022 ರಲ್ಲಿ ಇವರ ಚೊಚ್ಚಲ ಕವನ ಸಂಕಲನ ಪ್ರೇಮವೀಣೆ ಬಿಡುಗಡೆಯಾಗಿ ಸಹೃದಯರನ್ನು ಆಕರ್ಷಿಸಿದೆ. ಇವರಿಗೆ ಮಾಣಿಕ್ಯ ಪ್ರಕಾಶನದ “ಪ್ರತಿಭಾ ಮಾಣಿಕ್ಯ ಪ್ರಶಸ್ತಿ” , ಕವನ ರಚನೆಗಾಗಿ ಸಾಹಿತ್ಯ ಸಂಘಟನೆಗಳಿಂದ ಬಹುಮಾನಗಳು ದೊರೆತಿವೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಹಾಸನದ ಸಹ ಕಾರ್ಯದರ್ಶಿಯಾಗಿ ಸಾಹಿತ್ಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.