ಮಚ್ಚೇಂದ್ರ ಪಿ ಅಣಕಲ್ ಮೂಲತ: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದಲ್ಲಿ 12-06-1979 ರಂದು ಜನಿಸಿದರು. ಸದ್ಯ ಕಲಬುರಗಿ ನಿವಾಸಿ. ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕರು. ಪತ್ರಿಕೋದ್ಯಮ ಹಾಗೂ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಎಂ.ಇಡಿ ಪದವೀಧರರು.
ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಹಾಗೂ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ ಅನುಭವವಿದೆ. 2002 ರಲ್ಲಿ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭದ ತಿಂಗಳ ಕಥಾ ಸ್ಪರ್ಧೆಯಲ್ಲಿ ಇವರ 'ಲಾಟರಿ'ಕತೆ ಬಹುಮಾನ ಪಡೆದಿದೆ . 2010 ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ 6ನೇ ಅಕ್ಕ ವಿಶ್ವ ಕಥಾ ಸ್ಪರ್ಧೆಯಲ್ಲಿ 'ಡಾಂಬಾರು ದಂಧೆ' ಕತೆ ಬಹುಮಾನ ಪಡೆದು 'ದೀಪಾತೊರಿದೆಡೆಗೆ' ಕಥಾ ಸಂಕಲನದಲ್ಲಿ ಪ್ರಕಟಗೊಂಡಿದೆ.
ಬೆಳಗಾವಿಯಲ್ಲಿ ನಡೆದ 4ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಇವರ ' ಮೊದಲ ಗಿರಾಕಿ ' ಕಥಾ ಸಂಕಲನಕ್ಕೆ ಉತ್ತಮ ಕಥಾ ಪುಸ್ತಕ ಪ್ರಶಸ್ತಿ , ಆಕಾಶವಾಣಿ ದೂರದರ್ಶನ, ನಾಡಿನ ವಿವಿಧ ಪತ್ರಿಕೆಗಳಲ್ಲಿ ಕತೆ-ಕವನಗಳು ಪ್ರಕಟವಾಗಿವೆ. ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬೇಲೂರಿನ ಉರಿಲಿಂಗ ಪೆದ್ದಿ ಮಠದಿಂದ ರಾಜ್ಯಮಟ್ಟದ ಮೊದಲ ' ಉರಿಲಿಂಗ ಪೆದ್ದಿ ಪ್ರಶಸ್ತಿ ' ಪುರಸ್ಕಾರ ದೊರೆತಿದೆ.
ಕೃತಿಗಳು ಬದುಕುತ್ತೇನೆ ಕತ್ತಲೆ ಮೊಟ್ಟೆಯೊಡೆದು ( ಕವನಸಂಕಲನ), ಜ್ಞಾನ ಸೂರ್ಯ ( ಸಂಪಾದಿತ ಕಾವ್ಯ ), ಜನಪದ ವೈದ್ಯರ ಕೈಪಿಡಿ ( ಸಂಪಾದನೆ), ಲಾಟರಿ (ಕಥಾಸಂಕಲನ), ಮೊದಲ ಗಿರಾಕಿ ( ಕಥಾಸಂಕಲನ), ಹಗಲುಗಳ್ಳರು ( ಕಥಾಸಂಕಲನ) ಪ್ರಕಟವಾಗಿವೆ.