ಎಂ.ಡಿ. ಗೋಗೇರಿ ಅವರು 1962 ಜೂನ್ 1 ರಂದು ಜನಿಸಿದರು. ಹುಬ್ಬಳ್ಳಿಯಲ್ಲಿ ಟಿ.ಸಿ.ಎಚ್. ತರಬೇತಿ ಪಡೆದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಬೊಮ್ಮನ ಹಳ್ಳಿಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಇವರ ಕವನ ಹಾಗೂ ಹರಟೆಗಳು ಸಂಯುಕ್ತ ಕರ್ನಾಟಕ, ಕರ್ಮವೀರ,ಕಸ್ತೂರಿ, ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಲಿಸುತ್ತ, ಕಲಿಯುತ್ತ ಬೆಳೆದ ಸಾಹಿತ್ಯದ ಗೀಳು ಇವರದ್ದಾಯಿತು . ವಿದ್ಯಾರ್ಥಿಗಳಿಗೆ ಅಭಿನಯ, ಗೀತೆ, ಪ್ರಹಸನ ತರಬೇತಿಗಳನ್ನು ನೀಡುತ್ತಾ ಬಂದರು. ನಂತರದ ದಿನಗಳಲ್ಲಿ ಕಲಘಟಕಿ ತಾಲ್ಲೂಕಿನ ಮಡಕಿ ಹೊನ್ನಳ್ಳಿಗೆ ಸಹಾಯ ಶಿಕ್ಷಕರಾಗಿ ನೇಮಕರಾದರು.
ಕಾವ್ಯಕೃಷಿ ಪ್ರಾರಂಭಿಸಿ ತಮ್ಮ ಮೊಟ್ಟಮೊದಲ ಕವನ ಸಂಕಲನ ಜೀವಜೇನು ಪ್ರಕಟ ಮಾಡಿದರು. ಹಲವಾರು ಕವಿಗೋಷ್ಠಿ, ರೇಡಿಯೋ ಕಾರ್ಯಕ್ರಮಗಳ ಮೂಲಕ ತಮ್ಮ ಸಾಹಿತ್ಯ ಚಟುವಟಿಕೆಯನ್ನು ಮುಂದುವರೆಸಿದರು.ಭಾವ ಸಂಗಮ, ಕೂಗುತಿವೆ ಕಲ್ಲುಗಳು, ಇದೋ ಕರ್ನಾಟಕ, ನಾವು ಸರ್ವಸ್ವ-ತಂತ್ರರು, ತಾಯಿಯ ಉಡಿಯಲ್ಲಿ, ಚುನಾವಣೆಗೆ ನಿಂತ, ದ್ರಾಕ್ಷಿ ಗೊಂಚಲು, ಪುಟ್ಟನ ಪರಿಸರ ಇವರ ಕವನ ಸಂಕಲಗಳು.