ಕೋಲಾರದ ಬಳಿಯ ಕಲ್ಲುಗುಡ್ಡವೊಂದರಲ್ಲಿ ‘ಆದಿಮ’ ಎಂಬ ಸಂಸ್ಥೆ ಕಟ್ಟಿ ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಹೊಸದೊಂದು ಚಿಂತನಧಾರೆಯನ್ನು ಸೇರಿಸಿದೆ. ಆ ಮೂಲಕ ಆದಿಮ ಸಮುದಾಯಗಳ ಕಲೆ, ಸಂಸ್ಕೃತಿಗೆ ಹೊಸ ದಾರಿ ತೋರಿಸಿದ ವಿಶಿಷ್ಟ ಲೇಖಕ ರಂಗಕರ್ಮಿ ಶ್ರೀಕೋಟಗಾನಹಳ್ಳಿ ರಾಮಯ್ಯ ಅವರು.
ಮೌಖಿಕ ಪರಂಪರೆಗೆ ದನಿಯಾಗುವ ನಿಟ್ಟಿನಲ್ಲಿ ಹಾಡುಗಾರರಾಗಿ ಗುರುತಿಸಿಕೊಂಡ ರಾಮಯ್ಯನವರು ಬರೆಯಬೇಕೆಂಬ ತಮ್ಮ ಒಳತುಡಿತದಿಂದ ಬಹಳ ಕಾಲ ತಪ್ಪಿಸಿಕೊಳ್ಳಲಾಗಲಿಲ್ಲ. ಸದ್ದಿಗಂಜುವ ಬುದ್ಧ ಎಂಬ ಕವಿತೆಯಮೂಲಕ ಬರವಣಿಗೆ ಆರಂಭಿಸಿದ ಕೆ. ರಾಮಯ್ಯ ಅವರು ಮುಂದೆ ಅನೇಕ ನಾಟಕಗಳನ್ನು ಬರೆದರು. ಶಿಕ್ಷಣದ ಮಹತ್ವ, ಸಮಾನತೆ, ಸಾಮಾಜಿಕ ಅನಿಷ್ಟಗಳನ್ನು ಕುರಿತು ಅವರು ಬರೆದ ನಾಟಕಗಳು ನಾಡಿನ ತುಂಬಾ ಪ್ರದರ್ಶನಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉಪಸಂಸ್ಕೃತಿ ಮಾಲೆಯಡಿ ಸಿಂದ್ ಮಾದಿಗರ ಸಂಸ್ಕೃತಿ ಕೃತಿಯು ಸಾಂಸ್ಕೃತಿಕ ದಾಖಲೆಯಾಗಿ ಉಳಿದಿದೆ. ಅವರೇ ಹೇಳುವಂತೆ ದಲಿತ ಚಳವಳಿ ಅವರಿಗೆ ಸಿಕ್ಕ ದೊಡ್ಡ ಪಾಠಶಾಲೆ. ಅವರ ಪ್ರಯೋಗಶೀಲ ಹಾದಿಯಲ್ಲಿ ಸಿಕ್ಕ ಅನುಭವಗಳೇ ಮಾಸ್ತರು. ಅವರ ಇತ್ತೀಚಿನ ಮಹತ್ವದ ಕೃತಿ ತಲಪರಿಕೆ. ಬಯಲಸೀಮೆಯ ಜನರ ಬದುಕಿನ ಭಾಗವೇ ಆಗಿರುವ ನೀರಿನ ಸಂರಕ್ಷಣೆ ಕುರಿತು ನಮ್ಮ ಜನಪದರಿಗಿದ್ದ ಅಗಾಧ ಜ್ಞಾನವನ್ನು ತೆರೆದಿಟ್ಟ ಕೃತಿಯಾಗಿದೆ.
ನೂರಾರು ಕನಸುಗಳನ್ನು ಕಾಣುತ್ತಾ ರಂಗಚಟುವಟಿಕೆಗಳ ಮೂಲಕವೇ ಬದುಕನ್ನು ಕಟ್ಟುತ್ತಾ ದೇಸೀ ಚಿಂತನೆಗಳನ್ನು ಬಿತ್ತುತ್ತಿರುವ ಕೋಟಿಗಾನಹಳ್ಳಿ ರಾಮಯ್ಯನವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.