ಯುವ ಬರಹಗಾರ ಕಪಿಲ ಪಿ ಹುಮನಾಬಾದೆ ಅವರು ಮೂಲತಃ ಬೀದರ್ ನವರು. ಬೀದರನಿಂದ ನೌಬಾದ ಹಾದಿ ಹಿಡಿದು, ಎರಡು ಬೋಳು ಗುಡ್ಡವಿಳಿದು ಹೋದರೆ ಅಲ್ಲಿ ಕಾಣುವ ಅಲಿಯಾಬಾದ್ ಎಂಬ ಪುಟ್ಟ ಗ್ರಾಮದಲ್ಲಿ 1996 ಜನವರಿ 25ರಂದು ಜನಿಸಿದರು. ಪ್ರಭು ವೀರಶೆಟ್ಟಿಯವರ ಮೊದಲ ಮಗ ಕಪಿಲ ಪಿ ಹುಮನಾಬಾದೆ. 2019 ನೇ ಸಾಲಿನ ವಿಜಯಕರ್ನಾಟಕ ಯುಗಾದಿ ಕಥಾಸ್ಪರ್ಧೆಯ ಟಾಪ್ 25 ಕಥೆಗಳಲ್ಲಿ ಇವರ ಬಾಗಿಲು ಎಂಬ ಸಣ್ಣಕಥೆ ಆಯ್ಕೆಯಾಗಿದೆ. ಸದ್ಯ ಕಾವ್ಯಮನೆ ಪ್ರಕಾಶನ ಬಳ್ಳಾರಿ, ಮುಖ್ಯ ಸಂಚಾಲಕರಾಗಿ ಕಾರ್ಯ ನಿರ್ವೈಸುತ್ತಿದ್ದಾರೆ. ಈಗ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಎಂ.ಎ ಎರಡನೇ ವರ್ಷದ ವಿದ್ಯಾರ್ಥಿ. ಹಾಣಾದಿ ಇವರ ಮೊದಲ ಕಾದಂಬರಿ. ಇದು ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಚೊಚ್ಚಲ ಕೃತಿ ಪ್ರೋತ್ಸಾಹಧನಕ್ಕೆ ಆಯ್ಕೆಯಾಗಿದೆ. ಇವರ ಹಾಣಾದಿ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ.