ರೋಚಕ ಕತೆಗಳ ಮೂಲಕ ಗುರುತಿಸಿಕೊಂಡ ಲೇಖಕ ಬಿ.ಡಿ. ಸುಬ್ಬಯ್ಯ ಅವರು ಮೂಲತಃ ವಿರಾಜಪೇಟೆ ತಾಲೂಕಿನ ಬೆಸಗೂರು ಗ್ರಾಮದವರು. ಬಾಚಮಾಡ ಮನೆತನದ ಕಾಕೆಮಾನಿ ಎಂಬ ಸ್ಥಳದಲ್ಲಿ ಜನಿಸಿದರು. ಆದ್ದರಿಂದ ಇವರ ಕಾವ್ಯನಾಮ ಕಾಕೆಮಾನಿ. ಇವರ ತಂದೆ ದೇವಯ್ಯ, ತಾಯಿ- ಮಾಚವ್ವ. ಪೊನ್ನಂಪೇಟೆಯ ಹೈಸ್ಕೂಲಿನಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದರು. ಕೊಡಗು ಪತ್ರಿಕೆಯ ಸಂಪಾದಕರಾಗಿದ್ದರು.
ಬ್ರಿಟೀಷರ ಆಡಳಿತದಲ್ಲಿ ಅರಣ್ಯ ಇಲಾಖೆಯನ್ನು ಸೇರಿ ರೇಂಜರ್ ಆಗಿ ಬಡ್ತಿ ಹೊಂದಿ ಅಂಡಮಾನಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಅಂಡಮಾನಿನ ಅನುಭವಗಳನ್ನು ಜರುವಾ ಮತ್ತು ಸಾಂಪೆನ್ಸ್ ಆದಿವಾಸಿಗಳ ಬದುಕನ್ನು ಆಧಾರವಾಗಿಟ್ಟುಕೊಂಡು ಬಿಲ್ಲು-ಬಾಣ ಎಂಬ ಕತಾಸಂಕಲವನ್ನು ಪ್ರಕಟಿಸಿದ್ದಾರೆ. ನರಭಕ್ಷಕ ಜೀವನವನ್ನು ಮೈನವಿರೇಳಿಸುವಂತೆ ಚಿತ್ರಿಸಿದ್ದಾರೆ. ಬೇಟೆ ನೆನಪು, ಕವನ ಗುಚ್ಛ, ತುಳುನಾಡಿನ ವೀರನಾದ ಕೋಟಿ ಚನ್ನಯ್ಯ ಸೇರಿದಂತೆ ಕೊಡಗಿನ ಇತಿಹಾಸ ಪುಟಗಳಿಂದ ಎಂಬ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.