ಕೆ.ಪಿ. ರಾವ್ ಭಾರತೀಯ ಭಾಷಾ ಗಣಕ ಪಿತಾಮಹರೆಂದೇ ಪ್ರಸಿದ್ಧರಾಗಿದ್ದಾರೆ. ಇವರ ಮೂಲ ಹೆಸರು ಕಿನ್ನಿಕಂಬಳ ಪದ್ಮನಾಭರಾವ್, ಇವರು 29 ಫೆಬ್ರವರಿ 1940ರಂದು ಜನಿಸಿದರು. ಗಣಕ ಪಿತಾಮಹರೆಂದೇ ಪ್ರಸಿದ್ದರಾದ ರಾವ್ ತಾಂತ್ರಿಕ ತರಬೇತಿ ಪಡೆದದ್ದು ಟಾಟಾ ಅಣುಶಕ್ತಿ ಸಂಶೋಧನಾ ವಿಭಾಗದಲ್ಲಿ. ಸ್ನಾತಕೋತ್ತರ ಕಂಪ್ಯೂಟರ್ ಇಂಜಿನಿಯರಿಂಗ್ ಶಿಕ್ಷಣ ಪಡೆದದ್ದು ಅಮೆರಿಕಾದ ಪುರ್ದೂ ವಿಶ್ವವಿದ್ಯಾಲಯದಲ್ಲಿ. ವ್ಯಾಸಂಗದ ನಂತರ ಟಾಟಾ ಸಂಸ್ಥೆ-ಹೊಮಿಭಾಭಾ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿದ ಅವರು ನಂತರ ಬೆಂಗಳೂರಿನ ಮೊನೋಟೈಪ್ ಕಂಪನಿಯಲ್ಲಿ ಕಾರ್ಯನಿರ್ವಹಿಸಿದ್ದರು. ನಿವೃತ್ತಿ ಬಳಿಕ ಮಣಿಪಾಲದ ಎಂ.ಐ.ಟಿಯಲ್ಲಿ ಪ್ರಿಂಟಿಂಗ್ ಟೆಕ್ನಾಲಜಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಲ್ಲದೆ. ಕ್ವಾರ್ಕ್ ಎಕ್ಸ್ ಪ್ರೆಸ್, ಅಡೋಬಿ ಸಿಸ್ಟಮ್ಸ್ ಸಂಸ್ಥೆಗಳ ಸಲಹೆಗಾರರಾಗಿಯೂ ಸೇವೆಸಲ್ಲಿಸಿದ್ದಾರೆ. ಇದಲ್ಲದೆ ದೇಶದ ವಿವಿಧ ಐಐಟಿ ಸಂಸ್ಥೆಗಳಲ್ಲಿ ಗೌರವ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದೆಲ್ಲದರ ಜೊತೆಗೆ ಹಿಮಾಲಯವನ್ನು 15 ಬಾರಿ ಆರೋಹಣ ಮಾಡಿ ಬಂದಿರುವ ಅವರು ವೇದದಿಂದ ಹಿಡಿದು ಅಣುವಿಜ್ಞಾನದವರೆಗೆ, ಪತ್ರಿಕೋದ್ಯಮದಿಂದ ಸಂಗೀತದವರೆಗೆ, ಭಾಷೆಗಳಿಂದ ಹಿಡಿದು ಕಂಪ್ಯೂಟರ್ವರೆಗೆ -ಹತ್ತು ಹಲವು ಕ್ಷೇತ್ರಗಳಲ್ಲಿ ಇವರು ಗಳಿಸಿರುವ ಜ್ಞಾನ ಅಪಾರ.
ಅದನ್ನು ಇತರರಿಗೂ, ಸಮಾಜಕ್ಕೂ ಧಾರೆ ಎರೆದ ಸಂತನಂತಹ ವ್ಯಕ್ತಿತ್ವ. ಕನ್ನಡ ಹಾಗೂ ಇತರ ಭಾರತೀಯ ಭಾಷೆಗಳಲ್ಲಿ ಕಂಪ್ಯೂಟರ್ ಕೀ ಬೋರ್ಡ್ ವಿನ್ಯಾಸ ತಯಾರಿಕೆ, ಕನ್ನಡದಲ್ಲಿ 'ಸೇಡಿಯಾಪು' ಪದಸಂಸ್ಕಾರಕ ತಂತ್ರಾಂಶ ರಚಿಸಿ ಮುಕ್ತ ಬಳಕೆಗೆ ನೀಡಿದವರು. ಇವರು ತಯಾರಿಸಿದ ಕನ್ನಡ ಕೀಲಿಮಣೆ ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣಿ ವಿನ್ಯಾಸವೆಂಬ ಮಾನ್ಯತೆ ಪಡೆದಿದೆ. 2013ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ, ಆಳ್ವಾಸ್ ನುಡಿಸಿರಿಯಲ್ಲಿ (2009ರಲ್ಲಿ) ಸನ್ಮಾನ. ತುಳು ಅಕಾಡೆಮಿ ಹಾಗೂ ಹಲವಾರು ಸಂಘ ಸಂಸ್ಥೆಗಳ ಗೌರವ ಸಮರ್ಪಣೆ ಇವರಿಗೆ ಸಂದಿದೆ. ಪದುಮನಾಭನ ಧ್ಯಾನ (ಆತ್ಮಕಥನ) ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ. ಕಲ್ಪನೆ, ತಾರ್ಕಿಕತೆಗಳನ್ನು ಮೇಳವಿಸಿಕೊಂಡ ವಿಶಿಷ್ಟ ಕಾದಂಬರಿ 'ವರ್ಣಕ' ಪ್ರಕಟಗೊಂಡಿದೆ.