1906ರಲ್ಲಿ ಹುಟ್ಟಿ,1967ರಲ್ಲಿ ನಮ್ಮನ್ನಗಲಿದ ಗೋಕೃ ಎಂಬ ಸಂಕ್ಷಿಪ್ತ ನಾಮದಿಂದ ಖ್ಯಾತರಾಗಿದ್ದ ಕೊಡಿಗೇನಹಳ್ಳಿ ಗೋಪಾಲಕೃಷ್ಣರಾವ್,ನವೋದಯ ಸಾಹಿತ್ಯ ಸಂದರ್ಭದಲ್ಲಿ ಸಣ್ಣ ಕಥೆ, ಪ್ರಬಂಧ, ಕವಿತೆ, ನಾಟಕ ಹೀಗೆ ನಾನು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವರಾದರೂ, ಕನ್ನಡ ಸಾಹಿತ್ಯ ಲೋಕ ಅವರನ್ನು ಉತ್ತಮ ಕಥೆಗಾರರೆಂದೇ ಗುರುತಿಸಿ ಗೌರವಿಸಿದೆ.
ಮಾಸ್ತಿಯವರ 'ಜೀವನ' ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ದಕ್ಷತೆ ಪ್ರದರ್ಶಿಸಿ, ನಾಡು-ನುಡಿ ಸೇವೆ ಮಾಡಿದರು. ಇವರನ್ನು ಕನ್ನಡದ ಆಸ್ತಿ' ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸ್ವತಃ ಮೆಚ್ಚಿ ಅಭಿನಂದಿಸಿದರು. ಮೈಸೂರು ಮಹಾರಾಜ ಶ್ರೀ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಸನ್ಮಾನಿಸಿದರು, ಸರ್ ಎಂ. ವಿಶ್ವೇಶ್ವರಯ್ಯ ಅವರು ಬೆನ್ನುತಟ್ಟಿ ಹಾರೈಸಿದರು ಬೇಂದ್ರೆ, ಕಾರಂತ ಮೊದಲಾದ ಸಾಹಿತ್ಯ ದಿಗ್ಗಜರೊಂದಿಗೆ ಆತ್ಮೀಯ ಒಡನಾಟವಿರಿಸಿದ್ದ ಗೋಕೃ, ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಆಪ್ತ ಕಾರ್ಯದರ್ಶಿಯಾಗಿ ನಾಡಿನ ಅಭಿವೃದ್ಧಿಗೆ ಅಹರ್ನಿಶಿ ಶ್ರಮಿಸಿದರು.