ಲೇಖಕಿ ಜಯಲಕ್ಷ್ಮಿ ಎನ್.ಎಸ್ ಕೋಳಗುಂದ ಅವರು ಮೂಲತಃ ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ಕೋಳಗುಂದ ಗ್ರಾಮದವರು. 1979 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಜನಿಸಿದ ಅವರು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ನಿಡಘಟ್ಟದಲ್ಲಿ ಪೂರೈಸಿದರು. ತಂದೆ- ಶಂಕರಪ್ಪ, ತಾಯಿ- ಸುಶೀಲಮ್ಮ. ಅರಸೀಕೆರೆಯ ಶ್ರೀ ಸಿದ್ದೇಶ್ವರ ಪ. ಪೂ ಕಾಲೇಜಿನಲ್ಲಿ ಪ.ಪೂ. ಶಿಕ್ಷಣ ಪಡೆದು, ಮಂಗಳೂರಿನ ಕಪಿತಾನಿಯೋ ವಿದ್ಯಾ ಸಂಸ್ಥೆಯಲ್ಲಿ ವೃತ್ತಿ ಶಿಕ್ಷಣ ಪಡೆದರು. ನಂತರ 2002ರ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದರು. 2012-13ನೇ ಸಾಲಿನ "ತಾಲೂಕು ಉತ್ತಮ ಶಿಕ್ಷಕಿ" ಗೌರವಕ್ಕೆ ಪಾತ್ರರಾಗಿದ್ದು ಅದೇ ವರ್ಷ ನೆಹರು ವಿದ್ಯಾಸಂಸ್ಥೆಯು "ಜಿಲ್ಲಾ ಉತ್ತಮ ಶಿಕ್ಷಕಿ" ಎಂದು ಗುರುತಿಸಿ ಸನ್ಮಾನಿಸಿ ಗೌರವಿಸಿದೆ.
ಹದಿಮೂರು ವರ್ಷಗಳ ನಂತರ ವರ್ಗಾವಣೆಗೊಂಡು ಇದೀಗ ಅರಸೀಕೆರೆ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತವರೂರು ನಿಡಘಟ್ಟದಲ್ಲಿದ್ದ ಜಿಲ್ಲಾ ಕೇಂದ್ರ ಗ್ರಂಥಾಲಯ ಅಲ್ಲಿನ ಪುಸ್ತಕ ರಾಶಿ ಇವರನ್ನು ಆಕರ್ಷಿಸಿ ಉತ್ತಮ ಓದುಗಳನ್ನಾಗಿ ರೂಪಿಸಿತು. ಪಕ್ಕದ ಊರು ಚಟ್ನಳ್ಳಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನ ಸಾಹಿತ್ಯದೆಡೆಗೆ ಒಲವು ಮೂಡಿಸುವುದರ ಜೊತೆಗೆ ಕವಿತಾ ರಚನೆಗೆ ಪ್ರೇರೇಪಿಸಿತು. ಅಂದು ಭದ್ರಾವತಿ ಆಕಾಶವಾಣಿ ನಡೆಸಿಕೊಡುತ್ತಿದ್ದ ‘ಯುವ ಕವಿಗೋಷ್ಠಿ’ಗೆ ಆಯ್ಕೆಯಾಗಿ ಕವನಗಳನ್ನು ವಾಚಿಸುವ ಮೂಲಕ ಕನ್ನಡ ಸಾಹಿತ್ಯದ ಅಂಗಳಕ್ಕೆ ತಮ್ಮ ಮೊದಲ ಹೆಜ್ಜೆ ಇಟ್ಟರು. ತಾವು ಕಟ್ಟಿದ ಕವನಗಳಿಗೆ ತಾವೇ ರಾಗ ಸಂಯೋಜಿಸಿ ತಮ್ಮ ಶಾಲೆಯ ಮಕ್ಕಳಿಂದ ಹಾಡಿಸುತ್ತಿದ್ದ ಇವರ ಚೊಚ್ಚಲ ಕವನ ಸಂಕಲನ ‘ತಾಯೊಡಲ ತಲ್ಲಣ’ ಪ್ರಕಟಗೊಂಡಿದೆ. ಈ ಕೃತಿಯು ಗದಗ ಜಿಲ್ಲೆ ರೋಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ “ಸಾಹಿತ್ಯ ಚಿಗುರು” ಪ್ರಶಸ್ತಿ ನೀಡಿ, ಗೌರವಿಸಿದೆ.