ಭಾರತಕ್ಕೆ ಸ್ವಾತಂತ್ರ ಸಿಕ್ಕ ಸಂದರ್ಭದಲ್ಲಿ ಇಂದೂ ರಮೇಶ ಅವರಿಗೆ ಹತ್ತು ವರ್ಷ. ಮೈಸೂರು ಸಂಸ್ಥಾನ ವ್ಯಾಪ್ತಿಯ ವಿವಿಧೆಡೆ ಕನ್ನಡ ಮಾಧ್ಯಮದಲ್ಲಿ ಶಾಲಾ ಶಿಕ್ಷಣದ ನಂತರ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಸಮಾಜಶಾಸ್ತ್ರ ಹಾಗೂ ಇಂಗ್ಲಿಷ್ ಸಾಹಿತ್ಯ ಪದವಿ ಶಿಕ್ಷಣ ಪಡೆದರು. ಕನ್ನಡದ ಖ್ಯಾತ ದಿನಪತ್ರಿಕೆಯೊಂದರಲ್ಲಿ ಅವರ ಮೊದಲ ಲೇಖನ ಪ್ರಕಟವಾದಾಗ ಅವರಿಗೆ ಕೇವಲ 15 ವರ್ಷ. ಅವರು ಹತ್ತು ಹಲವು ಲೇಖನಗಳನ್ನು ಹಾಗೂ ಕಥೆಗಳನ್ನು ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಬರೆದು ಸಾಹಿತ್ಯ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಬೆಂಗಳೂರಿನ ಆಕಾಶವಾಣಿ (ವಿವಿಧ ಭಾರತಿ) ಯಲ್ಲಿ 30ಕ್ಕೂ ಅಧಿಕ ವರ್ಷ ಕಾಲ ಸೇವೆ ಸಲ್ಲಿಸಿ, ಕೇಂದ್ರ ನಿರ್ದೇಶಕರಾಗಿ ನಿವೃತ್ತರಾದರು. ಇವರ ಅಧಿಕಾರ ಅವಧಿಯಲ್ಲಿ ಎರಡು ಬಾರಿ ‘ಉತ್ತಮ ಆಕಾಶವಾಣಿ ಕೇಂದ್ರ (Best Station) ಎಂಬ ಪ್ರಶಸ್ತಿಗೆ ಪಾತ್ರವಾಗಿತ್ತು. ವುಮೆನ್ಸ್ ಇಂಟರ್ ನ್ಯಾಷನಲ್ ನ್ಯೂಸ್ ಗ್ಯಾದರಿಂಗ್ ಸರ್ವಿಸೆಸ್ (WINGS) ಸುದ್ದಿ ಸಂಸ್ಥೆಗೆ ಇಂದಿಗೂ ಅವರು ರೇಡಿಯೋ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ‘ಫಾರೆಸ್ಟ್ ವುಮೆನ್ ಡ್ವೆಲ್ಲಿಂಗ್ ಇನ್ ಎಕ್ಸಿಲ್’ ಎಂಬ ಬುಡಕಟ್ಟು ಮಹಿಳೆಯರಿಗೆ ಸಂಬಂಧಿಸಿದ ರೇಡಿಯೋ ಕಾರ್ಯಕ್ರಮವು ‘ಅಂತಾರಾಷ್ಟ್ರೀಯ ಮಾಧ್ಯಮ ಸ್ಪರ್ಧೆ’ಯಲ್ಲಿ ಗಮನ ಸೆಳೆದಿದೆ. ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಅವರು ಇಷ್ಟಪಡುತ್ತಿದ್ದು, ಕುಟುಂಬ-ಸ್ನೇಹಿತರಿಗೆ ಉಣಬಡಿಸಿ ಸಂಭ್ರಮಿಸುವ ಮನಸ್ಸು ಅವರದು. ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಇಂದೂ ರಮೇಶ್ ಅವರಿಗೆ ಗೀಲನ್ ಬಾರ್ ರೇ ಸಿಂಡ್ರೋಮ್ ಎನ್ನುವ ಖಾಯಿಲೆಗೆ ಸಿಲುಕಿದ ಅವರು ಈ ಖಾಯಿಲೆ ಮತ್ತು ಅದರಿಂದ ಚೇತರಿಸಿಕೊಂಡ ಸ್ಪೂರ್ತಿದಾಯಕ ಕಥೆಯನ್ನು 'ಮೃತ್ಯೋರ್ಮಾ ಅಮೃತಂಗಮಯ' ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.