ಕವಿ, ಸಾಹಿತಿ, ಹಂದಲಗೆರೆ ಗಿರೀಶ್ ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಂದಲಗೆರೆ ಗ್ರಾಮದವರು. ತಂದೆ ಚಿಕ್ಕತಿಮ್ಮಯ್ಯ, ತಾಯಿ ಶಾಂತಮ್ಮ. ಸಾಮಾನ್ಯ ರೈತಕುಟುಂಬದಲ್ಲಿ ಹುಟ್ಟಿದ ಗಿರೀಶ್ ಕೆಲಸ ಅರಸಿ ಬೆಂಗಳೂರಿಗೆ ಬಂದವರು. ಬೆಂಗಳೂರಿನ ಖಾಸಗೀ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಾ ಬದುಕು ಕಟ್ಟಿಕೊಂಡಿದ್ದಾರೆ.
ರಂಗಭೂಮಿ, ಸಾಹಿತ್ಯ ಮತ್ತು ಸಿನಿಮಾ ಆಸಕ್ತಿಯ ವಿಚಾರಗಳು. ಸಧ್ಯ ಕೃಷಿಯಲ್ಲೂ ತೊಡಗಿರುವುದರಿಂದ ಬಿಡುವಿನ ಸಮಯವೆಲ್ಲಾ ಕೃಷಿಗೆ ಮೀಸಲಿಟ್ಟಿದ್ದಾರೆ. ' ನೇಗಿಲ ಗೆರೆ ' 'ನೀರಮೇಗಲ ಸಹಿ' ಎಂಬ ಎರಡು ಕವನ ಸಂಕಲನಗಳು ಮತ್ತು 'ಅರಿವೇ ಅಂಬೇಡ್ಕರ್ 'ಕೃತಿ ಸಂಪಾದನೆ ಮಾಡಿದ್ದಾರೆ. ಅವರ ಕವಿತೆ ' ಬಯಲ ಜೋಗಿ ' ಏಕಾಂಗಿಯಾಗಿ ಹೊರಡು ಕವಿತೆಯನ್ನು ದೃಶ್ಯರೂಪಕ್ಕೆ ಅಳವಡಿಸಿದ್ದು ರಾಜ್ಯಾದ್ಯಂತ ಜನಮನ್ನಣೆಗಳಿಸಿದೆ.