ಎಚ್. ಎಂ. ಪರಮೇಶ ಚಿತ್ರದುರ್ಗ ಜಿಲ್ಲೆಯ ಹರ್ತಿಕೋಟೆಯ ಶ್ರೀ ಪರಮೇಶ್ವರಯ್ಯ ಅವರು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ. ಪದವೀಧರರು. ಶ್ರೀಯುತರು ಕಳೆದ 30 ವರ್ಷಗಳಿಂದ ಅಧ್ಯಾಪನ ವೃತ್ತಿಯಲ್ಲಿ ನಿರತರಾಗಿದ್ದು, ಪ್ರಸ್ತುತ ಮಂಡ್ಯದ ಬಾಲಕರ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪಿಸುಗುಟ್ಟಿನ ಬಯಕೆ' ಕವನ ಸಂಕಲನದಿಂದ ಸಾಹಿತ್ಯಲೋಕ ಪ್ರವೇಶಿಸಿದ ಇವರು ಹದಿನೈದಕ್ಕೂ ಮಿಕ್ಕ ಕೃತಿಗಳನ್ನು ಹೊರತಂದಿದ್ದಾರೆ.
ಬದುಕೊಂದು ದಾರಿ' ಮತ್ತು 'ದುಡಿಮೆಗೊಂದು ದಾರಿ' ಎಂಬ ಇವರ ಎರಡು ಕೃತಿಗಳಿಗೆ ಜನ ಶಿಕ್ಷಕ ನಿರ್ದೇಶನಾಲಯ ನವದೆಹಲಿಯಿಂದ ರಾಷ್ಟ್ರೀಯ ಪುರಸ್ಕಾರ ದೊರಕಿದೆ. 'ಜೇನುಸಾಕಣೆ' ಎಂಬ ಇವರ ಮತ್ತೊಂದು ಕೃತಿ ಕರ್ನಾಟಕ ರಾಜ್ಯದ ಜನಶಿಕ್ಷಣ ನಿರ್ದೇಶನಾಲಯದಿಂದ ಪ್ರಶಸ್ತಿ ಗಳಿಸಿದೆ. ಸಂಗೊಳ್ಳಿ ರಾಯಣ್ಣ, ಲೋಕನಾಯಕನ ಕತೆ ವೀರವನಿತೆ ಅಹಲ್ಯಾಬಾಯಿ, ಗೋಬರ್ ಅನಿಲ, ಕೋಳಿ ಸಾಕಣೆ ಮತ್ತು ನೀರಾವರಿ ಇದೇ ಮಾಲೆಯ ಪುಸ್ತಕಗಳು.
ಹೊತ್ತು ಮುಳುಗುವ ಮುನ್ನ, ಶೇಷ ಶೋಷಿತರು, ಕಂತೆಗೆ ತಕ್ಕ ಬೊಂತೆ ಇವರ ಪ್ರಸಿದ್ಧ ನಾಟಕಗಳು. ಇವು ಹಲವಾರು ಬಾರಿ ರಂಗಪ್ರಯೋಗ ಕಂಡಿವೆ.
ಕನಕದಾಸರ 'ಹರಿಭಕ್ತಸಾರ' ಮತ್ತು ಕೀರ್ತನೆಗಳ ಸಂಗ್ರಹ 'ಕನಕ ಸುಧೆ' ಇವರ ಸಂಪಾದಿತ ಕೃತಿಗಳು. ಇವರು ಬರೆದ ವಿಮರ್ಶೆ ಸಂಶೋಧನಾ ಹಾಗೂ ಜಾನಪದಕ್ಕೆ ಸಂಬಂಧಿಸಿದ ಹಲವಾರು ಲೇಖನಗಳು ನಾಡಿನ ಪ್ರಸಿದ್ದ ಪತ್ರಿಕೆ, ಸಂಸ್ಕರಣ ಹಾಗೂ ಅಭಿನಂದನಾ ಗ್ರಂಥಗಳಲ್ಲಿ ಪ್ರಕಟವಾಗಿವೆ.