About the Author

ಸಣ್ಣ ಕಥೆಗಾರ, ಕಾದಂಬರಿಕಾರ, ನಾಟಕಕಾರ ಆದ ಚದುರಂಗರು (ಎಂ. ಸುಬ್ರಹ್ಮಣ್ಯರಾಜೇ ಅರಸ್ ಅವರು) ಕನ್ನಡದ ಮಹತ್ವದ ಲೇಖಕರಲ್ಲಿ ಒಬ್ಬರು. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ 1916ರ ಜನವರಿ 1ರಂದು ಜನಿಸಿದರು. ತಂದೆ ಮುದ್ದುರಾಜೇ ಅರಸ್ ಮತ್ತು ತಾಯಿ ಮರುದೇವಿ ಅರಸ್. ರಾಜಮನೆತನದ ಒಡನಾಟವಿದ್ದ ಇವರ ವಿದ್ಯಾಭ್ಯಾಸ ಮೈಸೂರಿನಲ್ಲಿ ನಡೆಯಿತು. ಮೈಸೂರಿನ ರಾಯಲ್ ಸ್ಕೂಲ್, ಬೆಂಗಳೂರಿನ ಇಂಟರ್ ಮೀಡಿಯೇಟ್  ಕಾಲೇಜು, ಮೈಸೂರು ಮಹಾರಾಜ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಬಿ.ಎ. ಪದವಿ ಪಡೆದರು. ಕಾನೂನು ಮತ್ತು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಪುಣೆಗೆ ಹೋದರು. ಕಾರಣಾಂತರಗಳಿಂದ ಶಿಕ್ಷಣ ಪೂರ್ಣಗೊಳ್ಳಲಿಲ್ಲ. ಗಾಂಧಿ ಪ್ರಭಾವಕ್ಕೆ ಒಳಗಾದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು, ಖಾದಿವಾರಿಗಳಾದರು. ಹಳ್ಳಿಯ ಉದ್ಧಾರಕ್ಕಾಗಿ ಮೈಸೂರನ್ನು ಬಿಟ್ಟು ಕಲ್ಲಹಳ್ಳಿಗೆ ಹೋಗಿ ಕೃಷಿಕರಾದರು. ಮಾಸ್ತಿ, ಗೊರೂರು, ಅನಕೃ, ತರಾಸು, ಟಾಲ್ಸ್ಟಾಯ್, ಗಾರ್ಕಿ ಮೊದಲಾದ ಸಾಹಿತಿಗಳ ಬರಹಗಳಿಂದ ಪ್ರೇರಿತರಾದ ಇವರು ಸಾಹಿತ್ಯ ಕೃಷಿಗೆ ಇಳಿದರು. ಪುಣೆಯಲ್ಲಿದ್ದಾಗ ಸಿನಿಮಾ ತಂತ್ರದ ಬಗ್ಗೆ ಅಧ್ಯಯನ ಮಾಡಿದ ಚದುರಂಗರು ಚಲನಚಿತ್ರರಂಗದಲ್ಲೂ ದುಡಿದರು. ಭಕ್ತ ಕುಂಬಾರ ಚಿತ್ರಕ್ಕೆ ಕಥಾ ಲೇಖಕರಾಗಿದ್ದರು. ಇಂಗ್ಲಿಷಿನ ‘ಮಾಯಾ’ ಚಿತ್ರದ ಸಹ ನಿರ್ದೇಶಕರಾಗಿದ್ದರು. ಇವರೇ ತಯಾರಿಸಿದ ‘ಸರ್ವಮಂಗಳಾ’ ಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರಕಿದೆ. ‘ಉಯ್ಯಾಲೆ’ ಚಿತ್ರಕ್ಕೆ ಉತ್ತಮ ಚಿತ್ರಕಥಾ ಲೇಖಕ ಪ್ರಶಸ್ತಿ ಬಂದಿದೆ. ರಾಷ್ಟ್ರಕವಿ ಕುವೆಂಪು ಮತ್ತು ನಾಟ್ಯವಿಶಾರದೆ ವೆಂಕಟಲಕ್ಷ್ಮಮ್ಮನವರನ್ನು ಕುರಿತು ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸಿದ್ದಾರೆ. ಇವರ ವೈಶಾಖ ಕಾದಂಬರಿಗೆ 1982ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.

ಇವರ ಸಾಹಿತ್ಯ ಸಾಧನೆಗೆ ಹತ್ತಾರು ಪ್ರಶಸ್ತಿ ಗೌರವ, ಸನ್ಮಾನಗಳು ಲಭಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1978 ಮತ್ತು 1994), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1982ರಲ್ಲಿ ವೈಶಾಖ ಕಾದಂಬರಿಗೆ), ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (1993) ಇವರಿಗೆ ದೊರೆತಿದೆ. ೧೯೯೪ರಲ್ಲಿ ಮಂಡ್ಯದಲ್ಲಿ ಜರುಗಿದ 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (1994) ಅಧ್ಯಕ್ಷತೆ ವಹಿಸಿದ್ದರು. 1998ರ ಅಕ್ಟೋಬರ್ 19ರಂದು ನಿಧನರಾದರು.

ಚದುರಂಗರು ರಚಿಸಿದ ಕೃತಿಗಳು ಕೆಲವು ಹೀಗಿವೆ : ಕಾದಂಬರಿಗಳು : ಸರ್ವಮಂಗಳಾ (1950), ಉಯ್ಯಾಲೆ (1960), ವೈಶಾಖ (1981), ಹೆಜ್ಜಾಲ (1998)

ಕಥಾಸಂಕಲನಗಳು: ಸ್ವಪ್ನ ಸುಂದರಿ (1948), ಶವದ ಮನೆ (1950), ಇಣುಕು ನೋಟ (1950), ಬಂಗಾರದ ಹೆಜ್ಜೆ (1951), ಮೀನಿನ ಹೆಜ್ಜೆ (1958), ಕ್ವಾಟೆ(1992), ಮೃಗಯಾ (1998) ಇತ್ಯಾದಿ ಕೃತಿಗಳು. ನಾಟಕಗಳು : ಕುಮಾರರಾಮ(1966), ಇಲಿಬೋನು(1972), ಬಿಂಬ(1990).

 

ಚದುರಂಗ (ಎಂ. ಸುಬ್ರಹ್ಮಣ್ಯರಾಜೇ ಅರಸ್)

(01 Jan 1916-19 Oct 1998)

Books about Author

BY THE AUTHOR