ವೈದ್ಯಕೀಯ ವಿಜ್ಞಾನ ಬರಹಗಾರ್ತಿ ಅನ್ನಪೂರ್ಣಮ್ಮ ಅವರು 1928 ರ ಜುಲೈ 17 ರಂದು ಜನಿಸಿದರು. ತಂದೆ ಚನ್ನಕೇಶವ ಶಾಸ್ತ್ರಿ, ತಾಯಿ ಮೀನಾಕ್ಷಮ್ಮ. ಎಂ.ಬಿ.ಬಿ.ಎಸ್ ಶಿಕ್ಷಣ ಪೂರೈಸಿದ ನಂತರ ನಾಗಪುರ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎಸ್.) ಪದವಿ ಪಡೆದರು. ನಂತರ ಪ್ರತಿಷ್ಠಿತ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ, ಆನಂತರ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿ ತಮಿಳುನಾಡಿನಲ್ಲಿ 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದರು.
’ಹದಿಹರೆಯದ ಹೆಣ್ಣು, ಹೊಸ ಜೀವದ ಹುಟ್ಟು, ಋತುಚಕ್ರ, ಶಿಶುಪ್ರಾಪ್ತಿಗೆ ವಿನೂತನ ವಿಧಾನಗಳು, ಶಿಶು ನಿರೀಕ್ಷೆಯಲ್ಲಿ ಸ್ತ್ರೀರಕ್ಷೆ, ವೈದ್ಯರೊಂದಿಗೆ ಮಾತುಕತೆ 1 ಹಾಗೂ 2 ಸಂಪುಟ, ಪ್ರೌಢ ಮಹಿಳೆ, ಮಗು-ಒಂದು ಅದ್ಭುತಸೃಷ್ಟಿ, ತಾಯಿಲೋಕ, ಸ್ತನ್ಯಪಾನದ ಶ್ರೇಷ್ಠತೆ, ಗೃಹಿಣಿಯರೇ ಕುಶಲವೇ, ಕನ್ನಡ ವೈದ್ಯಕೀಯ ವಿಶ್ವಕೋಶಕ್ಕೆ ಲೇಖನಗಳು, ಮಾನವ ಸಂತಾನೋತ್ಪತ್ತಿ ಜೀವಜಗತ್ತು, ನೀವು ಮತ್ತು ನಿಮ್ಮ ಮಗು, ಸುರಕ್ಷಿತ ತಾಯ್ತನ ಮತ್ತು ಶಿಶುವಿನ ಏಳಿಗೆ ಭಾಗ-1, ಪುಟ್ಟ ಮಗು ಹೀಗಿರಲಿ’ ಎಂಬ ಕೃತಿಗಳನ್ನು ರಚಿಸಿದ್ದಾರೆ. ’ಬಿ.ಸಿ.ರಾಯ್ ಪ್ರಶಸ್ತಿ, ವಿಶ್ವ ಮಹಿಳೆ ಪ್ರಶಸ್ತಿ, ವಿಚಾರ ಸಾಹಿತ್ಯಕ್ಕಾಗಿ 'ಸದೋದಿತ' ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ. ಡಾ. ಆಫ್ ಮಿಲೇನಿಯಂ, ರಾಜ್ಯೋತ್ಸವ ಪ್ರಶಸ್ತಿ, ವೈದ್ಯ ಸಾಹಿತ್ಯ ಶ್ರೀ ಪ್ರಶಸ್ತಿ’ ಲಭಿಸಿದೆ.