ವೃತ್ತಿಯಿಂದ ವಕೀಲರಾಗಿರುವ ಬಾಪು ಹೆದ್ದೂರಶೆಟ್ಟಿಯವರು ಪ್ರವೃತ್ತಿಯಿಂದ ಸಮಾಜವಾದಿ ರಾಜಕಾರಣಿ. ಅವರು ತಮ್ಮ ಕಾಲೇಜಿನ ದಿನಗಳಿಂದಲೇ ಸಮಾಜವಾದಿ - ಆಂದೋಲನದ ಜೊತೆಗೆ ಗುರುತಿಸಿಕೊಂಡವರು. ಪ್ರಜಾ ಸಮಾಜವಾದಿ ಪಕ್ಷದ ಹಾಗೂ ನಂತರ ಸಮಾಜವಾದಿ ಪಕ್ಷದ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿಗಳಾಗಿ ಪಕ್ಷ ಕಟ್ಟುವ ಕೆಲಸ ಮಾಡಿದ್ದಾರೆ. ಕರ್ನಾಟಕ ಪ್ರವಾಸೋದ್ಯಮ ನಿಗಮ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಗಳ ಅಧ್ಯಕ್ಷರಾಗಿ, ನಂತರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿ ಸರಕಾರಿ ಅಧಿಕಾರವನ್ನೂ ಕಂಡಿದ್ದಾರೆ. ಭೂಗ್ರಹಣ ಚಳುವಳಿಯಲ್ಲಿ ಭಾಗವಹಿಸಿದ ಅವರು, ತುರ್ತು ಪರಿಸ್ಥಿತಿಯಲ್ಲಿ ಸಕ್ರಿಯರಾಗಿದ್ದು ಡೈನಮೈಟ ಸಿಡಿಸಿದ್ದರೆಂದೂ ಅವರ ನಿಕಟವರ್ತಿಗಳು ಹೇಳುತ್ತಾರೆ. ಅವರು ಬರೆದ ಹಾಗೂ ಪ್ರಕಟಗೊಂಡ ಲೇಖನಗಳು ಹಲವಾರು, ಅವರು ಬರೆದ ಭಾರತದ ಹಾಗೂ ವಿಶ್ವದ ಸಮಾಜವಾದಿ ಆಂದೋಲನದ ಇತಿಹಾಸಗಳು, ಕಮ್ಯುನಿಜಲಿ, ಜನತಂತ್ರ, ಹಾಗೂ ಸಮಾಜವಾದಗಳ ಬಗ್ಗೆ, ಮುಂದೆ ಸಮಾಜವಾದಿ ಚಿಂತನೆ ಹಾಗೂ ಆಂದೋಲನಗಳು ಪಡೆಯಬಹುದಾದ ಆಯಾಮಗಳ ಬಗ್ಗೆ ವಿಚಾರಪೂರ್ಣ ಲೇಖನಗಳ ಸಂಗ್ರಹಗಳೂ ಪ್ರಕಟವಾಗಿವೆ. ಸಮಾಜವಾದಿ ಅಧ್ಯಯನ ಕೇಂದ್ರದ ಸಂಸ್ಥಾಪಕ ಸದಸ್ಯರಲ್ಲಿ ಇವರೂ ಒಬ್ಬರು. ಕೇಂದ್ರದ ಚಟುವಟಿಕೆಗಳಲ್ಲಿ ಇನ್ನೂ ಸಕ್ರಿಯರಾಗಿದ್ದಾರೆ.