ಲೇಖಕ ಬಿ.ಎಸ್. ವೆಂಕಟರಾಮ್ ಅವರು ಮೂಲತಃ ಬೆಂಗಳೂರಿನವರು. ತಂದೆ-ಬಿ.ವಿ. ಸುಬ್ಬರಾವ್, ತಾಯಿ- ಗೌರಮ್ಮ. ರಂಗಭೂಮಿ ಹಾಗೂ ಪತ್ರಿಕಾರಂಗದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, 14ನೇ ವಯಸ್ಸಿನಲ್ಲಿಯೇ ಶಶಿರೇಖಾ ಪರಿಣಯದ ಕೃಷ್ಣನಾಗಿ ರಂಗಪ್ರವೇಶ ಪಡೆದರು. ಕೈಲಾಸಂ ಅವರ ಗರಡಿಯಲ್ಲಿ ಪಳಗಿದರು. ಅಲ್ಲಿಂದ ಹಲವಾರು ನಾಟಕಗಳಲ್ಲಿ ನಟಿಸಿದರು. ಕೈಲಾಸಂರ ಬಹಳಷ್ಟು ನಾಟಕಗಳ ಲಿಪಿಕಾರರಾಗಿಯೂ ದುಡಿದರು. ಇವರ ನಿರ್ದೇಶನದ ಚಲನಚಿತ್ರ- ‘ಬಹದ್ದೂರ್ ಗಂಡು. ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಸರಕಾರದ ರಂಗಭೂಮಿ ಸಲಹಾ ಸಮಿತಿ ಅಧ್ಯಕ್ಷರಾಗಿ, ಸಂಗೀತ ನಾಟಕ ಅಕಾಡಮಿಯ ಹಲವಾರು ಕಾರ್ಯಕ್ರಮಗಳ ರೂವಾರಿಯಾಗಿ, ಪಶ್ಚಿಮ ಬಂಗಾಲದ ಸಂಗೀತ ನಾಟಕ ಅಕಾಡಮಿಯ ಸಮೀಕ್ಷಕರಾಗಿ, ರಾಜ್ಯದ ನಾಟಕ ಪಠ್ಯಪುಸ್ತಕ ಸಮಿತಿ, ಆಂಧ್ರಪ್ರದೇಶ ಸರಕಾರದ ಪಠ್ಯಪುಸ್ತಕ ಸಮಿತಿ ಸದಸ್ಯರಾಗಿ, ಪರಿಷತ್ತಿನ ಸ್ವರ್ಣ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಧ್ಯಕ್ಷರಾಗಿದ್ದರು.
ರಂಗಭೂಮಿಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಛಾಯಾ ನಾಟಕ ಅಕಾಡಮಿಯನ್ನು ಸ್ಥಾಪಿಸಿದರು. ಸರಕಾರದ ಮಾನ್ಯತೆ ಪಡೆದು ಛಾಯಾ ಆರ್ಟಿಸ್ಟ್ ಅಂಡ್ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮೂಲಕ ರಾಜ್ಯ ಶಿಕ್ಷಕರಿಗೆ ರಂಗತರಬೇತಿ ನೀಡಿದರು. ಲೇಖಕರಾಗಿ ‘ಬಂಜೆ ಮಕ್ಕಳಿವರೇನಮ್ಮ’, ‘ಅಲೆಗಳು’, ‘ಒಳಸಂಚು’ ಎಂಬ ನಾಟಕಗಳನ್ನು, 27 ಗಂಟೆಗಳಲ್ಲಿ ಎಂಬ ಕಿರು ಕಾದಂಬರಿ. ಅಂತರಗಂಗೆ ಎಂಬ ಕಥಾಸಂಕಲನ ರಚಿಸಿದ್ದಾರೆ. ವೆಂಕಟರಾಮ್ ಅವರು 15-10-1987ರಂದು ನಿಧನರಾದರು. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಬಿ.ಎಸ್. ವೆಂಕಟರಾಮ್ ಅವರ ಹೆಸರಿನಲ್ಲಿಯೇ ಕಲಾ ಭವನವನ್ನು ನಿರ್ಮಿಸಲಾಗಿದ್ದು, ಇಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಮಾಡಲಾಗುತ್ತದೆ.