ಓದು-ಬರಹ ನನಗೆಂದಿಗೂ ವ್ಯಸನವೇ: ಮೇಘನಾ ಕಾನೇಟ್ಕರ್ 


ಮಲೆನಾಡು, ಬಯಲುಸೀಮೆ ಹಾಗು ಮೆಟ್ರೋ ನಗರಗಳ ಭಾಷಾ ಸೊಗಡು ಮತ್ತು ಜೀವನ ಶೈಲಿಯನ್ನೊಳಗೊಂಡ ಕೌಟುಂಬಿಕ ಹಾಗು ಸಾಮಾಜಿಕ ಕತೆಗಳ ರಸದೌತಣ ನಿಮ್ಮ ಓದಿಗೆ ಕಾದಿದೆ’ ಎನ್ನುತ್ತಾರೆ ಮೇಘನಾ ಕಾನೇಟ್ಕರ್. ಅವರು ‘ಲೈಫ್ ನಲ್ಲೊಂದು ಯೂ ಟರ್ನ್’ ಕತಾಸಂಕಲನ ಕುರಿತು ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ.
ಓದು-ಬರಹ ನನಗೆಂದಿಗೂ ವ್ಯಸನವೇ. ಅನಕೃ, ತರಾಸು, ಕಾರಂತರು, ವಾಣಿ, ಎಂ.ಕೆ. ಇಂದಿರಾ, ತ್ರಿವೇಣಿಯರಾದಿಯಾಗಿ ಇದುವರೆಗೂ ಸಮಕಾಲೀನ ಸಾಹಿತಿಗಳು, ಉದಯೋನ್ಮುಖ ಕಥೆಗಾರರ ಬಹುತೇಕ ಕೃತಿಗಳನ್ನು ಓದುತ್ತ ಬಂದಿರುವ ನನಗೆ ಬರಹವು ಸೆಳೆದಿದ್ದು ಆಶ್ಚರ್ಯವೇನಲ್ಲ.
ಮೊದಮೊದಲು ಕಚ್ಚಾಪಟ್ಟಿಯ (ರಫ್‌ ನೋಟ್‌ ಬುಕ್) ಕೊನೆ ಪುಟಗಳಲ್ಲಿ ಬರೆದಿಡುತ್ತಿದ್ದ ಕವಿತೆಗಳು ಪ್ರಮೋಷನ್‌ ಪಡೆದು ಡೈರಿಗಳಲ್ಲಿ ಸ್ಥಾನ ಪಡೆದವು. ಕ್ರಮೇಣ ಅದರೊಂದಿಗೆ ಸಣ್ಣಕತೆಗಳು ಸೇರಿಕೊಂಡವು. ಆದರೆ ಹೀಗೆ ಬರೆದು ಬರೆದು ಇಡುತ್ತಿದ್ದರೆ ಅವನ್ನೆಲ್ಲ ಓದುವರಾರು? ವಿಮರ್ಶಿಸುವರಾರು? ಮೆಚ್ಚುವರಾರು? ಎನ್ನುವ ಪ್ರಶ್ನೆ ಬಂದಾಗ ಅದಕ್ಕೆ ಉತ್ತರವಾಗಿ ಸಿಕ್ಕಿದ್ದೇ ಪ್ರತಿಲಿಪಿ ಎಂಬ ವೇದಿಕೆ. ಅಲ್ಲಿ ನನ್ನೆಲ್ಲ ಬರಹಗಳನ್ನು ಪ್ರಕಟಿಸುತ್ತಾ ಬಂದೆ. ಓದುಗರಷ್ಟೆ ಅಲ್ಲದೆ ಕನ್ನಡ ಸಾರಸ್ವತಲೋಕದ ಹಿರಿಯ ಲೇಖಕರು ಸಹ ನನ್ನ ಬರಹಗಳನ್ನು ಓದಿ ವಿಮರ್ಶಿಸಿದರು. ಮೆಚ್ಚುಗೆಯನ್ನೂ ವ್ಯಕ್ತಪಡಿಸಿ ಹೀಗೆಯೇ ಮುಂದುವರಿಯುವಂತೆ ಪ್ರೋತ್ಸಾಹಿಸಿದರು.

ಚಿಕ್ಕಂದಿನಿಂದಲೂ ಸಾಹಿತ್ಯದ ನಂಟು ಹೊಂದಿರುವ ನಾನು ಪರೀಕ್ಷೆ ಇದ್ದಾಗ ಅಭ್ಯಾಸ ಮಾಡಿದ್ದಕ್ಕಿಂತ ಹೆಚ್ಚಾಗಿ ಪಠ್ಯಪುಸ್ತಕ ಹಾಗು ಪಕ್ಕಾ ಪಟ್ಟಿಯ (ಫೇರ್‌ ನೋಟ್‌ ಬುಕ್)‌ ನಡುವೆ ಕಳ್ಳತನದಿಂದ ವಾರಪತ್ರಿಕೆಗಳನ್ನಿಟ್ಟು ಓದುತ್ತಿದ್ದೆ. ಹೀಗೆ ಮಾಡುವಾಗ ಅಮ್ಮನ ಕೈಯಲ್ಲಿ ಸಿಕ್ಕಿಹಾಕಿಕೊಂಡು ಒದೆ ತಿಂದಿರುವ, ಮಾರ್ಕ್ಸ್‌ಕಾರ್ಡ್‌ಗೆ ಸಹಿ ಹಾಕುವಾಗ ಅಪ್ಪ ಬೈದಿರುವ ದಾಖಲೆಗಳಿವೆ. ಇಷ್ಟೆಲ್ಲಾ ಆಗಿಯೂ ಈ ಚಟ ಮಾತ್ರ ನನ್ನನ್ನು ಬಿಟ್ಟು ಹೋಗಿಲ್ಲ, ಬದಲಿಗೆ ವ್ಯಾಪಕವಾಗಿ ಆವರಿಸಿಕೊಂಡಿದೆ. ಅದು ಎಷ್ಟರಮಟ್ಟಿಗೆ ಎಂದರೆ ಈಗಲೂ ಕಚೇರಿ ಕೆಲಸದ ಮಧ್ಯೆ ಆಗಾಗ ಡೆಸ್ಕ್‌ ಕೆಳಗೆ ಕಾದಂಬರಿ ಪುಸ್ತಕವಿಟ್ಟು ಓದುತ್ತಿರುತ್ತೇನೆ. ಏನಾದರೂ ಹೊಳೆಯಿತೆಂದು ಬರೆಯಬೇಕೆಂದಾಗ ನನ್ನ ಲ್ಯಾಪ್‌ಟಾಪ್‌ನಲ್ಲಿ ವರ್ಡ್‌ ಡಾಕ್ಯುಮೆಂಟ್‌ ಸದಾ ತೆರೆದಿಟ್ಟುಕೊಂಡಿರುತ್ತೇನೆ. ದೇವರ ದಯೆಯಿಂದ ಮ್ಯಾನೇಜರ್‌ ಕಣ್ಣಿಗೆ ಬೀಳದಂತೆ ವಿಂಡೋ ಸ್ವ್ಯಾಪ್‌ ಮಾಡುವ ಜಾಣತನವಂತೂ ಕೈ ಕೊಟ್ಟಿಲ್ಲ!

ಮೊದಮೊದಲು ಪ್ರತಿಲಿಪಿಯಲ್ಲಿ ಬರೆದು ದಾಖಲಿಸುತ್ತಿದ್ದ ನನ್ನೆಲ್ಲ ಕತೆ, ಕವಿತೆ ಹಾಗು ಲೇಖನಗಳು ಅಲ್ಲೇ ನಡೆಸುವ ಸಣ್ಣಪುಟ್ಟ ಸ್ಪರ್ಧೆಗಳಲ್ಲಿ ಪೈಪೋಟಿಗಿಳಿದವು. ಆನಂತರ ಬೇರೆಬೇರೆ ಅಂತರ್ಜಾಲ ಪತ್ರಿಕೆ (ಬ್ಲಾಗ್) ಗಳಲ್ಲಿ ಪ್ರಕಟಿಸತೊಡಗಿದೆ. ವಿಮರ್ಶೆ, ಮೆಚ್ಚುಗೆಗಳು ಬರತೊಡಗಿದಾಗ ಮುದ್ರಣ ಮಾಧ್ಯಮಗಳಿಗೆ ಸಹ ನನ್ನ ಬರಹಗಳನ್ನು ಕಳಿಸುವ ಧೈರ್ಯ ಬಂತು.‌ ಪ್ರಕಟವಾದಾಗ ನನಗಿಂತಲೂ ಹೆಚ್ಚು ಖುಷಿ ಪಟ್ಟಿದ್ದು ನನ್ನ ಪ್ರೀತಿಸುವ, ಪ್ರೋತ್ಸಾಹಿಸುವ ಜೀವಗಳು. ಹೀಗೆ ಪ್ರಕಟವಾದ ನನ್ನ ಬರಹಗಳನ್ನು ಗಮನಿಸಿದ ಕೆಲವು ಸಂಪಾದಕರು ವಿಶೇಷಾಂಕಗಳಿಗೆ ಬರೆಯಲು ಆಹ್ವಾನವಿತ್ತರು. ಅದೇ ಧೈರ್ಯದ ಮೇಲೆ ಒಂದೆರಡು ಸ್ಪರ್ಧೆಗಳಿಗೆ ನನ್ನ ಕತೆಗಳನ್ನು ಕಳಿಸಿದಾಗ ಸಮಾಧಾನಕರ ಹಾಗು ತೀರ್ಪುಗಾರರ ಮೆಚ್ಚುಗೆಯ ಬಹುಮಾನಗಳು ಅರಸಿ ಬಂದವು. ಕೆಲವು ಕತೆಗಳು ಮೈಲ್ಯಾಂಗ್‌ ಆಡಿಯೋದಲ್ಲಿ ಆಡಿಯೋ ಕತೆಗಳಾಗಿ ಪ್ರಕಟಗೊಂಡು ಕೇಳುಗರ ಮೆಚ್ಚುಗೆ ಗಳಿಸಿದವು.

ಇದೀಗ ನಾನು ಬರೆದ ಒಟ್ಟು ಕತೆಗಳಲ್ಲಿ ನನಗೆ ಉತ್ತಮವೆನಿಸಿದ, ಮನಸ್ಸಿಗೆ ತೃಪ್ತಿಕೊಟ್ಟ, ವಿಶೇಷಾಂಕದಲ್ಲಿ ಪ್ರಕಟಗೊಂಡಿರುವ ಹಾಗು ಸಹೃದಯಿ ಸಾಹಿತಿ ಮಿತ್ರರೆಲ್ಲ ಓದಿ ವಿಮರ್ಶಿಸಿ ಮೆಚ್ಚಿಕೊಂಡ ಕೆಲವು ಕತೆಗಳನ್ನು ಒಟ್ಟುಗೂಡಿಸಿ ಸಂಕಲನವನ್ನಾಗಿ ಹೊರ ತರುವ ಅಭಿಲಾಷೆ ಹೊಂದಿದ್ದೇನೆ. ಇದರಲ್ಲಿ 80-90ರ ದಶಕದ ಕತೆಗಳೊಂದಿಗೆ ಪ್ರಸ್ತುತ ಕಾಲದ ಕತೆಗಳೂ ಇವೆ. ಮಲೆನಾಡು, ಬಯಲುಸೀಮೆ ಹಾಗು ಮೆಟ್ರೋ ನಗರಗಳ ಭಾಷಾ ಸೊಗಡು ಮತ್ತು ಜೀವನ ಶೈಲಿಯನ್ನೊಳಗೊಂಡ ಕೌಟುಂಬಿಕ ಹಾಗು ಸಾಮಾಜಿಕ ಕತೆಗಳ ರಸದೌತಣ ನಿಮ್ಮ ಓದಿಗೆ ಕಾದಿದೆ. ಎಂದಿನಂತೆ ನಿಮ್ಮ ಅಭಿಮಾನ, ಹಾರೈಕೆ ಹಾಗು ಪ್ರೋತ್ಸಾಹ ನನ್ನೊಂದಿಗಿರುತ್ತದೆ ಎಂಬ ಭರವಸೆಯಲ್ಲಿ…

-ಮೇಘನಾ ಕಾನೇಟ್ಕರ್

MORE FEATURES

ಪಂಚಮಗಳ ನಡುವೆ- ಸತ್ಯಕಾಮ

09-05-2024 ಬೆಂಗಳೂರು

'ತಂತ್ರಶಾಸ್ತ್ರ ಭಾರತ ಕೊಡಮಾಡಿದ ವಿಶಿಷ್ಟ ಶಾಸ್ತ್ರ.‌ ಈ ಶಾಸ್ತ್ರವನ್ನು ಸತ್ಯಕಾಮರು ವಿಜ್ಞಾನ ಎಂದು ಕರೆದಿದ್...

ಗಾಂಧಿಯನ್ನು ನಾನು ಅರಿತನೆಂದರೆ ಅರಿತಿಲ್ಲ, ಅರಿತಿಲ್ಲವೆಂದರೆ ಒಂದಿಷ್ಟು ಅರಿತಿರುವೆನು

09-05-2024 ಬೆಂಗಳೂರು

‘ಮೋಹನದಾಸ ಕರಮಚಂದ್ ಗಾಂಧಿಯವರನ್ನು ಕುರಿತು ಹೊಸ ತಲೆಮಾರು ಪ್ರೀತಿ-ದ್ವೇಷದ ಭಾವನೆಯನ್ನು ಬೆಳೆಸಿಕೊಂಡಿದೆ’...

ಈ ನನ್ನ ಪುಸ್ತಕಕ್ಕೆ ಕೂಡ ಸಾವಿಲ್ಲದ ಅಮರತ್ವ ಪ್ರಾಪ್ತವಾಗುತ್ತದೆ: ನರೇಂದ್ರ ಪೈ

09-05-2024 ಬೆಂಗಳೂರು

'ಈ ಪುಸ್ತಕಗಳ ಓದು ಸಾವಿರದ ಒಂದು ಪುಸ್ತಕಗಳ ಓದಿಗೆ ಸಮ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಲ್ಲೆ. ಹಾಗಾಗಿಯೇ ಇಂಥ ಅ...