ಗಾಂಧಿಯನ್ನು ನಾನು ಅರಿತನೆಂದರೆ ಅರಿತಿಲ್ಲ, ಅರಿತಿಲ್ಲವೆಂದರೆ ಒಂದಿಷ್ಟು ಅರಿತಿರುವೆನು


‘ಮೋಹನದಾಸ ಕರಮಚಂದ್ ಗಾಂಧಿಯವರನ್ನು ಕುರಿತು ಹೊಸ ತಲೆಮಾರು ಪ್ರೀತಿ-ದ್ವೇಷದ ಭಾವನೆಯನ್ನು ಬೆಳೆಸಿಕೊಂಡಿದೆ’ ಎನ್ನುತ್ತಾರೆ ಡಾ. ಮಹಾಬಲೇಶ್ವರ ರಾವ್. ಅವರು ‘ಗಾಂಧಿ ನಾನು ಅರಿತಂತೆ’ ಕೃತಿಯ ಕುರಿತು ಬರೆದ ಲೇಖಕರ ಮತ್ತು ಬೆನ್ನುಡಿಯ ಬರಹ ನಿಮ್ಮ ಓದಿಗಾಗಿ.

ಗಾಂಧಿಯನ್ನು ನಾನು ಅರಿತನೆಂದರೆ ಅರಿತಿಲ್ಲ. ಅರಿತಿಲ್ಲವೆಂದರೆ ಒಂದಿಷ್ಟು ಅರಿತಿರುವೆನು. ಅರಿತದ್ದು ಅರೆಬೆಂದಿರಬಹುದು. ಅರಿಯದ್ದು ಹಾಗೆ ಇರಬಹುದು. ಅಂತೂ ಕಳೆದ ನಾಲ್ಕು ದಶಕಗಳಿಂದಲೂ ಗಾಂಧಿ ವಿಚಾರಧಾರೆಯ ಸಾಂಗತ್ಯ ನನಗಿದೆ. ಅವರನ್ನು ಕುರಿತಾದ ಹಲವು ಕೃತಿಗಳನ್ನು ಓದಿದ್ದೇನೆ. ಅವರ 'ಆತ್ಮ ಚರಿತ್ರೆ'ಯನ್ನು ಶಾಲಾ ಮಕ್ಕಳಿಗೆ ಪಾಠ ಹೇಳಿದ್ದೇನೆ. ಬೇರೆ ಬೇರೆ ಸಂದರ್ಭಗಳಲ್ಲಿ ಗಾಂಧಿಯವರನ್ನು ಕುರಿತಾದ ಕನ್ನಡದ ಕವಿತೆಗಳನ್ನು ಉಲ್ಲೇಖಿಸಿದ್ದೇನೆ. ಗಾಂಧಿಯವರನ್ನು ಕುರಿತು ಭಾಷಣ ಮಾಡಿದ್ದೇನೆ. ನನ್ನ ಕೆಲವು ಭಾಷಣಗಳ ಸಂಕಲನವನ್ನು ಹೀಗೆ ಪುಸ್ತಕ ರೂಪದಲ್ಲಿ ಇದೀಗ ನಿಮ್ಮ ಮುಂದಿಡುತ್ತಿರುವೆ. ತಪ್ಪುಗಳಿದ್ದರೆ ನನ್ನವು. ಒಪ್ಪೆಲ್ಲ ಗಾಂಧಿಯವರಿಗೆ ಸೇರಿದ್ದು, ಅರಿತೆನೆಂದರೂ ಅರಿವಿನ ಬಗೆಗೆ ಸಿಲುಕದ ಗಾಂಧಿ ನನ್ನ ಪಾಲಿಗೆ ಸದಾ ಒಂದು ವಿಸ್ಮಯ.

ಮೋಹನದಾಸ ಕರಮಚಂದ್ ಗಾಂಧಿಯವರನ್ನು ಕುರಿತು ಹೊಸ ತಲೆಮಾರು ಪ್ರೀತಿ ದ್ವೇಷದ ಭಾವನೆಯನ್ನು ಬೆಳೆಸಿಕೊಂಡಿದೆ. ಹಳೆಯ ಕಾಲದ ಆರಾಧನೆ ಹಿಂದೆ ಸರಿದು ವಸ್ತು ನಿಷ್ಠವಾಗಿ, ನಿರ್ದಾಕ್ಷಿಣ್ಯವಾಗಿ, ಕೆಲವೊಮ್ಮೆ ತೀರ ಕಟುವಾಗಿ ಗಾಂಧಿ ಜೀವನ ಮತ್ತು ದರ್ಶನವನ್ನು ವಿಮರ್ಶಿಸುವ ಪರಿಪಾಠ ಬೆಳೆದಿದೆ. ಅಂತೆಯೇ ಮುಸಲ್ಮಾನರ ಪರ, ಹಿಂದೂ ವಿರೋಧಿ ಎಂಬ ನೆಲೆಯಲ್ಲಿ ಗಾಂಧಿಯವರ ಬಗ್ಗೆ ಕಡುದ್ವೇಷವನ್ನು ಬೆಳೆಸುವ ಮತ್ತು ಹಂತಕ ಗೊಡ್ಸೆಯನ್ನು ಆರಾಧಿಸುವ ಪರಂಪರೆಗೆ ಚಾಲನೆ ನೀಡಲಾಗಿದೆ. ಗಾಂಧಿ ಪ್ರತಿಪಾದಿಸಿದ ಸತ್ಯಾಗ್ರಹ, ಅಹಿಂಸೆ, ಸ್ವದೇಶಿ, ಸ್ವರಾಜ್ಯ, ಚರಕ ಮೊದಲಾದ ಪರಿಕಲ್ಪನೆಗಳನ್ನು ಪರಾಮರ್ಶಿಸುತ್ತಾರೆ. ಗಾಂಧಿ ಕೊಲೆಯ ಆರಂಭಿಕ ವಿಫಲಯತ್ನಗಳು ಮತ್ತು ಹತ್ಯೆಯ ಹಿಂದಿನ ಕಾರಣಗಳ ಮೇಲೆ ಕ್ಷಕಿರಣ ಬೀರುತ್ತಾರೆ. ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಸಂಘರ್ಷದ ಸಂವಾದದ ಸಂಬಂಧವನ್ನು ವಿವರಗಳ ಮೂಲಕ ಕಟ್ಟಿಕೊಡುತ್ತಾರೆ.

- ಡಾ. ಮಹಾಬಲೇಶ್ವರ ರಾವ್ ಉಡುಪಿ

MORE FEATURES

'ಹೊಂಬಳ್ಳಿ' ಹಗುರ ಪ್ರಬಂಧ ಅಂತ ಹೇಳಿದರೂ ಗಂಭೀರ ಮಾತುಗಳು ಇಲ್ಲಿವೆ

20-05-2024 ಬೆಂಗಳೂರು

'ಈ ಪುಸ್ತಕದಲ್ಲಿರುವ ಲೇಖನಗಳನ್ನು ಓದುವಾಗ ನಾನು ನನ್ನ ಅಮ್ಮನ ಜೊತೆಗೆ ಗೆಳತಿ ಜೊತೆ ಮಾತನಾಡುತ್ತಿದ್ದೇನೆ ಎಂಬ ಆಪ್ತ...

'ಡೇರ್ ಡೇವಿಲ್ ಮುಸ್ತಫಾ' ಚಿತ್ರಕಥೆ ಪುಸ್ತಕ ಬಿಡುಗಡೆ 

19-05-2024 ಬೆಂಗಳೂರು

ಬೆಂಗಳೂರು: ಡೇರ್ ಡೆವಿಲ್ ಮುಸ್ತಫಾ ಚಿತ್ರಕಥೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮವು 2024 ಮೇ 19ರಂದು ಬೆಂಗಳೂರಿನ ಸುಚಿತ್ರ...

ವಾರದ ಲೇಖಕ ವಿಶೇಷದಲ್ಲಿ ಖ್ಯಾತ ಕಾದಂಬರಿಕಾರ ಭಾರತೀಸುತ

19-05-2024 ಬೆಂಗಳೂರು

ಬುಕ್ ಬ್ರಹ್ಮ ವಾರದ ಲೇಖಕ ವಿಶೇಷದಲ್ಲಿ ಓದಿನೊಂದಿಗೆ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿಕೊಂಡು ಸೆರೆ ವಾಸ ಅನುಭವಿಸಿದ ಕನ್ನ...