Article

ಪ್ರವಾದಿಯವರ ಬದುಕ ಓದಿಸುವ ’ಓದಿರಿ’

ಗೆಳೆಯ ಮುರ್ತುಜಾ 'ಓದಿರಿ' ಗ್ರಂಥ ಓದಿಸಿದಾಗ ಟಿಸಿಲೊಡೆದ ಸಾಲುಗಳು ಹೀಗಿವೆ. ಬೊಳುವಾರು ಮಹಮದ್ ಕುಂಞಿಯವರು ಬರೆದ ಪ್ರವಾದಿ ಮುಹಮ್ಮದ್  ಜೀವನಾಧಾರಿತ ಕಾದಂಬರಿ ’ಓದಿರಿ’. ಜಗದ ಎಲ್ಲಾ ನೊಂದಾಯಿತ ಧರ್ಮಗಳು ಶಾಂತಿ ಮತ್ತು ಪ್ರೀತಿಯನ್ನ ಬಿತ್ತುತ್ತವೆ ಎಂಬುದು ಅಧಿಕೃತವಾಗಿ ಅರಿವಿಗೆ ಬಂತು. ಧರ್ಮದ ಸ್ವಾಸ್ಥ್ಯ ಹಾಳಾಗಿರುವದಕ್ಕೆ ಬೇರೊಂದು ಧರ್ಮದ ಪುಟ ತಿರುಗಿಸದೇ ಇರುವದು ಕಾರಣ. ಇಲ್ಲಿ ಮನುಷ್ಯರುಗಳ ನಡುವೆ ನಡೆಯುವ ನಿತ್ಯ ಕಲಹದಲ್ಲಿ ಧರ್ಮದ ಲೇಬಲ್ ಅಂಟಿಸಿ ಗುಂಪುಗಳನ್ನಾಗಿ ವಿಂಗಡಿಸಿವುದು ಅವಿವೇಕದ ಪರಮಾಧಿತನ. ವ್ಯಕ್ತಿಚಿತ್ರಣವನ್ನು ಇದಿರನು ನೋಡಿ ತೂಕಿಸುವುದಿಲ್ಲ. ಹಾಗಾಗಿ ಬದುಕು ಬಹಳ ಗಹನವಾಗಿ, ಸಂಕಟಕ್ಕೆ ಸಿಲುಕಿದೆ. ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಪ್ರವಾದಿ ಮುಹಮ್ಮದ್ ಚಿಕ್ಕವಯಸ್ಸಿನಲ್ಲಿ ದೊಡ್ಡಪ್ಪನಾದ ಅಬುತಾಲಿಬರ ಆಶ್ರಯದಲ್ಲಿ ಬೆಳೆದು ತನ್ನ ಸಣ್ಣ ಕಣ್ಣುಗಳಲ್ಲಿ ಭವಿಷ್ಯದ ಕನಸನ್ನು ಅಡಗಿಸಿಕೊಂಡು ಸದಾ ಹಸನ್ಮುಖಿಯಾಗಿದ್ದ ಪ್ರವಾದಿ ಮುಹಮ್ಮದ್ ಧರ್ಮವನ್ನು ಕಟ್ಟಿದ ಬಗೆ ಮೈನವಿರೇಳಿಸುವಂತಹದ್ದು, ಕುಂಞಿಯವರು ಓದಿಸಿದ ರೀತಿ ಕೂಡ ಅದ್ಬುತವಾಗಿದೆ. ತಾಯಿ ಅಮೀನಾ, ತಂದೆ ಅಬ್ದುಲ್ಲಾರ ಸಾವನ್ನು ಸಾವಲ್ಲವೇನು ಅನ್ನುವ ಹಾಗೇ ಚಿತ್ರಿಸಿದ್ದು ಓದುಗರನ್ನು ಸುಂದು ಹಿಡಿಸುತ್ತದೆ. ಗೆಳೆಯ ಅಬೂಬಕ್ಕರನೊಂದಿಗೆ ತನ್ನ ಎಲ್ಲಾ ಭಯವನ್ನು ಹತ್ತಿಕ್ಕಿ, ಸಾಕಷ್ಟು ಕಷ್ಟಗಳನ್ನು ತನ್ನ ಪ್ರವಚನದ ಮೂಲಕ ಮತ್ತು ಮಂದಹಾಸ ತುಂಬಿದ ನಯನಗಳ ಮೂಲಕ ಬಗೆಹರಿಸುವ ಪ್ರವಾದಿ ಸ್ವರೂಪವನ್ನು ವಿವರಿಸಿದ ಕುಂಞಿ ಕೂಡ ಅಕ್ಷರಗಳೊಂದಿಗೆ ಯುದ್ಧಕ್ಕೆ ಇಳಿದವರು. ಕೊನೆಗೆ ಪ್ರವಾದಿಯವರು 'ನನ್ನ ಮರಣದ ಬಗ್ಗೆ ದುಃಖಿಸದಿರಿ ಅದು ಆಗಿಯೇ ಆಗುತ್ತದೆ', 'ಮರಣದ ಬಳಿಕ ನನ್ನ ದೇಹವನ್ನು ಮಾತ್ರ ಧಪನ ಮಾಡಿರಿ. ತಪ್ಪು ವ್ಯಾಖ್ಯಾನಗಳೊಂದಿಗೆ ನನ್ನ ಮಾತುಗಳನ್ನು ಹಾಗೆಯೇ ಮಾಡದಿರಿ' ಎನ್ನುತ್ತಾರೆ. ಪ್ರವಾದಿ ಮುಹಮ್ಮದರನ್ನು ಅರಿತವರು ಮತ್ತು ಅರಿಯದವರು ಜೊತೆಗೂಡಿ ಓದಬೇಕಾದ ಕೃತಿ ಇದಾಗಿದೆ. 

ಪುಸ್ತಕದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

https://www.bookbrahma.com/book/odhiri

ಅಮರೇಶ ಗಿಣಿವಾರ