Article

ಮೊಗಲಾಯಿ ನೆಲದ ನೆನಹುಗಳ ಭಿತ್ತಿ; ಯಡ್ರಾಮಿ ಸೀಮೆ ಕಥನಗಳು

ಕಳೆದ ವರ್ಷ ಡಿಸೆಂಬರ್‌ನಲ್ಲಿ ಯಡ್ರಾಮಿಯಲ್ಲಿ ಜರುಗಿದ ಪ್ರಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಕಡಕೋಳ ಅವರು ಈ ಕೃತಿಯನ್ನು ಅಂದು ಲೋಕಾರ್ಪಣೆ ಮಾಡಿ ಯಡ್ರಾಮಿ ನೆನಪುಗಳನ್ನು ಹಂಚಿಕೊಂಡಿದ್ದರು. ಅಂದಿನಿಂದ ಈ ಕೃತಿಯ ಕುರಿತು ಏನೋ ಆಕರ್ಷಣೆವುಂಟಾಗಿ ಓದುವ ಕುತೂಹಲದಿಂದಲೇ ಪುಸ್ತಕ ತರಿಸಿಕೊಂಡೆ. ರಂಗಭೂಮಿಯ ಕುರಿತಾಗಿ ರಂಗ ಚಟುವಟಿಕೆ, ಸಂಶೋಧನೆ, ಅಧ್ಯಯನವನ್ನೇ ಕೇಂದ್ರವನ್ನಾಗಿಟ್ಟಿಕೊಂಡು ತಮ್ಮ ಬರಹವನ್ನು ಸ್ಥಾಯಿಯಾಗಿಸಿದ ಮಲ್ಲಿಕಾರ್ಜುನ ಕಡಕೋಳ ಯಡ್ರಾಮಿ ಎಂಬ ಸಣ್ಣಹಳ್ಳಿಯ ಪರಿಸರದಲ್ಲೇ ಬಾಲ್ಯವನ್ನು ಕಳೆದವರು. ತವರು ನೆಲದ ಬಗ್ಗೆ ಅಪಾರ ಪ್ರೀತಿಯನ್ನಿಟ್ಟುಕೊಂಡು ಹಳೆಯ ನೆನಪುಗಳಿಗೆ ಅಕ್ಷರದ ಜೀವ ತುಂಬಿ ಸಹೃದಯರಿಗೆ ರವಾನಿಸಿದರು. ಕಡಕೋಳರ 'ಯಡ್ರಾಮಿ ಸೀಮೆ ಕಥನಗಳು' ವಿಷಯ ವಸ್ತುವಲ್ಲದೇ ಆಕರ್ಷಕ ಮುದ್ರಣ ವಿನ್ಯಾಸದಿಂದಾಗಿ ಕೃತಿಯನ್ನು ಓದಲೇಬೇಕಿನಿಸುತ್ತದೆ.

      ಯಡ್ರಾಮಿ ಸೀಮೆಗೆ ಮೊಗಲಾಯಿ ಸೀಮೆಯೂ ಎಂದರೆ ಅಡ್ಡಿಯಿಲ್ಲ. ರಜಾಕಾರರ ದಾಳಿಗೂ ಈ ಊರು ತುತ್ತಾಗಿ ಸಾಕಷ್ಟು ಹಾನಿಯಾಗಿದ್ದಿದೆ. ಈ ಭಾಗದ ಪ್ರತಿಹಳ್ಳಿಗಳಲ್ಲೂ ಒಂದು ವಾಡೆಯಂತಹ ಭವ್ಯ ಮನೆ, ಊರ ಕಾವಲುಗೋಪುರದಂತಿರುವ ಹುಡೆಯು ನೋಡಿದಷ್ಟೇ ಧಾರುಣ ಚಿತ್ರಣವು ಅಲ್ಲಿ ಒಳಗೊಂಡಿರುತ್ತದೆ ಎಂಬುದನ್ನೂ ಮನಗಾಣಬೇಕಿದೆ. ಅದೆಷ್ಟೂ ವ್ಯಕ್ತಿಗಳೂ, ಅದೆಷ್ಟೂ ಐತಿಹ್ಯಗಳೂ ಎಲ್ಲರ ಬಾಳಿನಲ್ಲೂ ಬರುವಂತಹುಗಳೇ ಆದರೆ ಇಲ್ಲಿ ಕಡಕೋಳರು ಅವುಗಳನ್ನು ಚಿಂತಿಸಿದ್ದಾರೆ, ಚಿತ್ರಿಸಿದ್ದಾರೆ, ಭಿನ್ನ ಭಿನ್ನಭಾವಗಳಿಂದ ಕಂಡಿದ್ದಾರೆ, ಅವೆಲ್ಲವುಗಳ ಅಂಕಣ ಬರಹದಲ್ಲಿ ಸಾಮಾಜಿಕ ಜಾಲತಾಣದ ಪತ್ರಿಕೆ ಕೆಂಡ ಸಂಪಿಗೆಯಲ್ಲೂ, ಜನತಾವಾಣಿ ಮೊದಲಾದಡೆಗಳಲ್ಲಿ ಅನಾವರಣಗೊಂಡ ಬರಹಗಳ ಒಟ್ಟು ರೂಪವೇ ಈ 'ಯಡ್ರಾಮಿ ಸೀಮೆಯ ಕಥನ'. ಕೃತಿಯು.

      ಕಡಕೋಳ ಮಡಿವಾಳಪ್ಪ ತತ್ವಪದಕಾರ, ಸಂತ, ಕಾಲಜ್ಞಾನಿ ಆತನ ಅದೆಷ್ಟೋ ಪದಗಳು ಈ ಭಾಗದ ಜನರ ನಾಲಿಗೆಯ ತುದಿಯಲ್ಲಿ ನಿತ್ಯನಲಿದಾಡುತ್ತವೆ. ಇತನ ಊರು ಜೇವಗರ್‌ ತಾಲ್ಲೂಕು, ಈಗ ಯಡ್ರಾಮಿ ತಾಲ್ಲೂಕು ಕಡಕೋಳ. ಅವನ ಹೆಸರ ಮೇಲೆ ನಡೆಯುವ ಜಾತ್ರೆಯ ಹಲವು ವಿಶೇಷಗಳಿಂದ ಭಕ್ತಗಣವನ್ನು ಆಕರ್ಷಕವೆನಿಸುತ್ತದೆ. ಇಂತಹ ಊರಿನಿಂದ ಬಂದ ಲೇಖಕ ಮಲ್ಲಿಕಾರ್ಜುನ ಕಡಕೋಳರಿಗೆ ಸಹಜವಾಗಿ ತನ್ನೂರಿನ ಕುರಿತಾಗಿ ಅಪರಿಮಿತ ಪ್ರೀತಿಯನ್ನು ಕಾಪಿಟ್ಟುಕೊಂಡು ಬಂದಿದ್ದಾರೆ. ತನ್ನೂರಿನ ಸುತ್ತಲಿನ ಜನ, ಸ್ಥಳ, ಘಟನಾವಳಿಗಳು ಅವರಿಗೆ ಮಹತ್ವಕಾಂಕ್ಷೆಯ ಕಥನದ ಚಿತ್ರಣಗಳನ್ನು ಇಲ್ಲಿ ಉಣಬಡಿಸಿದ್ದಾರೆ.  ಅವರ ಮಾತಿನಂತೆಯೇ ಭೀಮೆಯೆಂಬುದು ಅನುಭಾವಲೋಕದ ಆಡುಂಬೋಲ ಇಲ್ಲಿನ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗ್ರಹಿಸಿರುವ ಕಡಕೋಳರು ಕಾವ್ಯಾತ್ಮಕ, ಕತೆಯಾಗಿಸುವ ಸಂವೇದನೆಗಳನ್ನು ನೀಡುವ ಮೂಲಕ ಬರವಣಿಗೆಯನ್ನು ಮತ್ತಷ್ಟು ಆಪ್ತವಾಗಿಸಿದ್ದಾರೆ. ಈ ಕಥನದಲ್ಲಿ ಒಟ್ಟು 38 ಲೇಖನಗಳನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದ್ದಾರೆ.

         ಮೊದಲ ಕಂತಿನ ಲೇಖನಗಳು ತಾವು ಕಂಡ ಪರಿಸರದ ಅಭಿವ್ಯಕ್ತಿಯಾಗಿವೆ. ತಮ್ಮೂರು ಕಡಕೋಳದ ಬಗೆಗಿನ ತಾವು ಬಾಲ್ಯದಲ್ಲಿ ಕಂಡಿದ್ದು ಈಗ ಇಲ್ಲ ಎಂದು ಹಳಹಳಿಸುತ್ತಾರೆ. ಕೃಷ್ಣೆ ಬಂದಾಗಿನಿಂದ ಶ್ರಮ ಸಂಸ್ಕೃತಿ ಹೋಗಿ ಶವ ಸಂಸ್ಕೃತಿ ಬಂದೊದಗಿದ್ದು ಅವರಿಗೆ ಬಹಳಷ್ಟು ಕಾಡಿದಂತಿದೆ. ಮೊದಲಿನಂತಿಲ್ಲ ತನ್ನೂರಿನ ಬಗ್ಗೆ ಬದಲಾದ ಕಡಕೋಳದ ಕುರಿತಾದ ಇಲ್ಲಿನ ಬರಹ ನಮ್ಮೂರನ್ನು ಒಂದು ಸಾರಿ ನೆನಪಿಸುತ್ತವೆ. ಹಿರೇಹಳ್ಳ,ಲಂಡ್ಯಾನಳ್ಳ, ಕೆಂಪ್ಹಳ್ಳ, ಕೊಂಪೆ, ಕುಂಬಾರದೊಡ್ಡಿ, ಗೂಡೂಸಾಬರ ಅಲಾಯಿ ಹಬ್ಬದ ಫಾತೆ-ಸಕ್ಕರೆ ಲೋಬಾನ, ಇಮಾಮಸಾಬರೆ ಅಲಾಯಿಪದ, ಅಪ್ಪನ ತತ್ವಪದ, ನೂರಂದಪ್ಪನ ಹಂತಿಪದ, ಏಕತಾರಿ, ಚಿನ್ನಿತಾಳ, ಭಜನೆ ಹೀಗೆ ಒಂದೆ ಎರಡೇ ಹಲವುಗಳ ಆಗರವಾಗಿದ್ದ ತನ್ನೂರು ಈಗ ಹುಡುಕುವೆದಲ್ಲಿ ಎಂದು ಲೇಖಕ ಮೌನಕ್ಕೆ ಜಾರುತ್ತಾರೆ. ಇಂತಹ ಊರೂಂದು ಜಾಗತೀಕರಣದ ಭರಾಟೆಯಲ್ಲಿ ಕಳೆದುಹೋಗಿದೆ ಎಂಬುದು ವಿಪರ್ಯಾಸ!. ಯಡ್ರಾಮಿ ಸಂತೆ ಲೇಖಕರಿಗೆ ಹೆಚ್ಚು ಕುತೂಹಲವನ್ನು, ಸಂಭ್ರಮವನ್ನು ಕೊಟ್ಟಿದೆ. ಸಂತೆಯನ್ನು ಹೊಕ್ಕು ಸ್ವಾನಂದವನ್ನು ಮೆಲಕುಹಾಕುತ್ತಾರೆ. ನಿಸರ್ಗ ಪ್ರೀತಿಯನ್ನು ತುಂಬಿಕೊಡುವ 'ನಿಂಬೆತೋಟದ ಸಾಲು ತೊರೆಗಳಲಿ' ಲೇಖನವು ಕಡಕೋಳ ಮತ್ತು ಯಡ್ರಾಮಿ ರಸ್ತೆಯ ಹಸಿರುಸೀಮೆಯನ್ನು ವಿವರಿಸುವ ಕಥನವಿದೆ. ಈ ಭಾಗದ ಲೇಖನಗಳು ಮನಷ್ಯಕೇಂದ್ರಿತ ಫರದಿಯ ವಸ್ತುಗಳು ವ್ಯಕ್ತಿಗೆ ಹತ್ತಿರವಾದಂತೆ ಅವುಗಳು ಸ್ವರ್ಗ ಸಮಾನವಾಗಿ ಕಾಣಿಸುತ್ತವೆ. ಅಂತಹ ಆಪ್ತಬರಹಗಳು ಇಲ್ಲಿವೆ. ಮೊಗಲಾಯಿ ನೆಲ ಲೇಖನವು ಮುಂಬೈ ಕರ್ನಾಟಕ ಪ್ರದೇಶದ ಸಿಂದಗಿ, ಯಳಮೇಲಿ ಊರುಗಳ ಭಾಂಧವ್ಯವನ್ನು ಹೇಳುತ್ತದೆ. ಯಳಮೇಲಿ ದನದ ಸಂತೆಯನ್ನು ಲೇಖಕರು ಇಲ್ಲಿ ಪ್ರಸ್ತಾಪಿಸಿದ್ದು ನೋಡಿದರೆ ಅತ್ಯಂತ ಮಹತ್ವದ ಘಟನೆಗಳನ್ನು ಸಾಕ್ಷೀಕರಿಸುವ ಪ್ರಯತ್ನವಾಗಿದೆ. ಯಳಮೇಲಿ- 30 ಎಂಬದು ಬಹುದೊಡ್ಡ ಜಾನುವಾರ ಸಂತೆ ನಡೆಯುವ ಕೇಂದ್ರವಾಗಿತ್ತು ಅಲ್ಲದೇ ವ್ಯಾಪಾರಕೇಂದ್ರವಾಗಿ ಹೈದ್ರಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕದ ಊರುಗಳ ಭಾಂದ್ಯವ್ಯಬೆಸೆಯುದಾಗಿತ್ತು. ಯಡ್ರಾಮಿಯ ಉಡುಪಿ ಹೋಟೆಲ್ ಲೇಖನವು ಲಲಿತ ಪ್ರಬಂಧ ಮಾದರಿಯು ಬರಹವಾಗಿದೆ. ಸ್ಥಳೀಯರ ಕೆಲವು ಹೊಟೇಲುಗಳು ಮಖಾಡೆ ಮಲಗಿಸಲು 1990ರ ಕಾಲದಲ್ಲಿ ಈ ಭಾಗದ ಎಲ್ಲ ಡೊಡ್ಡ ಊರುಗಳಲ್ಲೂ ಮಂಗಳೂರು ಕಡೆಯ ಬ್ರಾಹ್ಮರು ಉಡುಪಿ ಹೋಟೇಲ್ ಆರಂಬಿಸಿದರು. ನಮ್ಮ ಜನ ಅಲ್ಲಿಗೆ ತರಹೇವಾರಿ ತಿಂಡಿಗಳನ್ನು ತಿನ್ನಲು ಮುಗಿಬೀಳತೊಡಗಿದ್ದು ಸಹಜವೇ ಎನ್ನುವಷ್ಟು ಯಡ್ರಾಮಿಗೆ ಬಂದ ಈ ಹೋಟೆಲನ್ನು ಲೇಖಕರು ಈಸ್ಟ್ ಇಂಡಿಯಾ ಕಂಪನಿ ಎಂದು ಬಣ್ಣಿಸಿದ್ದು ಖರೇ ಎನಿಸುತ್ತದೆ. ಗಾಂವುಟಿ ಹಳ್ಳಿ ಹೊಟೇಲು ಗ್ರಾಹಕರು ಉಡುಪಿ ಹೊಟೇಲ್ ಗೆ ಮುಗಿಬೀಳುತ್ತಿದ್ದದು ಎಲ್ಲವೂ ಸ್ವಾರಸ್ಯಕರವಾಗಿ ಹೇಳುವ ಕಡಕೋಳರ ಈ ಬರಹ ಮೆಚ್ಚುಗೆಯಾಯಿತು. 

     ಕವಡಿ ಹಳ್ಳದ ದೆವ್ವಗಳು ಬರಹವಂತೂ ಬೇತಾಳ ಕತೆಯೊಳಗಿನ ಬರುವ ವಿವರಣೆ ತರಹ. ಸಣ್ಣಗೆ ಭಯಹುಟ್ಟಿಸುವ ದೆವ್ವಗಳ ಮಾಡುವ ಘನಂಧಾರಿ ಕಾರ್ಯಗಳು, ಅವುಗಳ ಬಯಕೆಗಳು, ಯಡ್ರಾಮಿ ಹಾದಿಯ ದೆವ್ವಗಳ ಪರಿವಾರದ ಕತೆಯ ವಿವರಣೆ ಇದೆ, ಈ ಪ್ರದೇಶದ ಎಲ್ಲವನ್ನೂ ಬಲ್ಲ ಕಡಕೋಳರು ದೆವ್ವಗಳ ಪ್ರಭಾವಳಿಗಳ ಪರಿಚಯ ಮಾಡಿಕೊಡುತ್ತಾರೆ.  ರಂಗಭೋಮಿಯ ಕುರಿತಾದ ಅವರ ಲೇಖನ ಒಂದು ಇಲ್ಲಿದೆ. ಯಡ್ರಾಮಿ ದೊಡ್ಡಾಟದ ತವರು ಮನೆ ಎಂದು ಕರೆದಿರುವ ಲೇಖಕ ರಂಗಭೂಮಿಗೆ ಮುಸ್ಲಿಂರ ಕೊಡುಗೆ ಹೆಚ್ಚಿದೆ ಎಂದಿದ್ದಾರೆ. ತಮ್ಮ ಸ್ಮೃತಿಪಟಲದ ಎಲ್ಲ ವ್ಯಕ್ತಿಗಳನ್ನು ಅವರ ಅಭಿನಯದ ಪಾತ್ರಗಳನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ರಂಗಕಲಾವಿದರ ವಿವರಗಳನ್ನು ದಾಖಲಿಸಿದ್ದಾರೆ. ಹೀಗೆ ಹನ್ನೊಂದು ಬರಹಗಳು ಇಲ್ಲಿ ಅಡಕವಾಗಿವೆ. ಮನಷ್ಯಕೇಂದ್ರಿತ ವಸ್ತುವನ್ನು ಸಾಮಾಜಿಕ ನೆಲೆಯಲ್ಲಿ ಕಂಡಿದ್ದಾರೆ. ಗ್ರಾಮ ಚುನಾವಣೆಯನ್ನು ಅದರಿಂದಾಗುವ ಅನಾಹುತವನ್ನು ಇಲ್ಲಿ ಚಿಂತಿಸಿದ್ದಾರೆ. 

     ಭಾಗ-2ರಲ್ಲಿ ವ್ಯಕ್ತಿಚಿತ್ರಣ ನೀಡುವ ಸ್ವರೂಪದ ಮತ್ತು ಸ್ಥಳನಿರೂಪಣೆ ಮಾಡುವ ಎಂಟು ಲೇಖನಗಳು ಇಲ್ಲಿವೆ. ಇವುಗಳು ವ್ಯಕ್ತಿಕೇಂದ್ರಿತವಾಗಿದ್ದರೂ ಸಾಂಸ್ಕೃತಿಕಕಳೆಯನ್ನು ತಂದುಕೊಡುತ್ತವೆ. ಹುಚ್ಚುಹಿಡಿಸಿದ ಹೀರೋಯಿನ್ ಬರೆಹವು ಮಲ್ಲಿಕಾರ್ಜುನ ಕಡಕೋಳರ ಬಾಲ್ಯದ ರಂಗಭೂಮಿಯ ಆಸಕ್ತಿಯನ್ನು ತೋರಿಸುತ್ತದೆ. ಸುನಂದಾಬಾಯಿ ಮಣ್ಣಿನ ಕೊಡವು ಅವರ ಬದುಕಿನ ಅವಿಭಾಜ್ಯವಸ್ತು ಆಗಿತ್ತು, ಕಡಕೋಳರಲ್ಲಿ ಕತೆಗಾರ ಇಲ್ಲಿ ಜಾಗೃತನಾಗುತ್ತಾನೆ. ಕತೆಯ ನಿರೂಪಣಾ ತಂತ್ರದಿಂದಾಗಿ ಬಡತನ, ಆಚಾರ-ವಿಚಾರ ಸಂಪನ್ನರಾಗಿದ್ದ ಶೀಲವಂತ ಸುನಂದಾಬಾಯಿ ಬಾಳಿನುದ್ದಕ್ಕೂ ಬಡತನದಲ್ಲಿಯೇ ಮಾಗಿದರೂ ಎಂದೂ ತಮ್ಮತನ ಬಿಟ್ಟುಕೊಟ್ಟವರಲ್ಲ, ಅವರ ಮಣ್ಣಿನ ಬಿಂದಿಗೆ ಬಹಳ ವರ್ಷದ ಜೋಪಾನದಿಂದ ಕಾಪಾಡಿಕೊಂಡು ಬಂದವರು, ಈ ಕೊಡ ನಾಶಮಾಡಿದ ಪಾಪಪ್ರಜ್ಞೆ ಲೇಖಕರಿಗಿದೆ ಎಲ್ಲವೂ ಕತೆಯ ಸಂವೇದನೆಯ ಸ್ವರೂಪದಲ್ಲಿ ಹರವಿಕೊಂಡಿದೆ. ಕಾವ್ಯಾತ್ಮಕ ಸಾಲುಗಳು ಪುಂಖಾನುಪುಂಖಿಯಾಗಿ ಈ ಕೃತಿಯೊಳಗಡೆ ನಲಿದಡಿವೆ. ತಲೆಬರಹಗಳು ಕಾವ್ಯದ ಚೆಲವುನ್ನೇ ಹೋಲುತ್ತವೆ. ಅವರ ಭಾಷಾ ಪ್ರಭುದ್ಧತೆಯಿಂದಾಗಿ ಬರಹ ಮತ್ತಷ್ಟು ಆಪ್ತವಾಗುತ್ತದೆ. ಭೀಮಾ ತೀರದ ಹಂತಕರು ಎಂಬ ಪದ ಕೇಳುತ್ತಲೇ ಲೇಖಕರ ಮುಗ್ಧಹೃದಯ ಹಿಂಡಿದಂತೆ ಅವರಿಗೆ ಅನಿಸಲಿಕ್ಕೆ ಸಾಕು!.  ಈ ಪದ  ಮತ್ತೆ ಮತ್ತೆ  ನನ್ನ ಚಿತ್ತಭಿತ್ತಿಯ ಮೇಲೆ ಘೋರದಾಳಿ ಮಾಡಿದಂತೆ ನೆನಪಿನ 'ಕ್ರೂರಪದ'ವಾಗಿ ಸಾವಿರ ಡೊಳ್ಳುಬಡಿದಂತಾಗುತ್ತದೆ ಎಂದಿದ್ದಾರೆ. ಈ ಮಾತು ಇಲ್ಲಿನವರೆಲ್ಲರಿಗೂ ಅನ್ವಯಿಸುತ್ತದೆ. ಈ ಪದ ತೆಗೆದುಹಾಕಲು ಸಾಕಷ್ಟು ಜನರು ಪ್ರಯ್ನಸಿದ್ದೂ ಇದೆ. ಬಳಕೆ ಮಾಡದಂತೆ ಕಟ್ಟಪ್ಪಣೆ ಹಾಕುವಷ್ಟು ಇಲ್ಲಿನವರಿಗೆ ಹೇಸಿಗೆ ತರಿಸಿದೆ. ಇದು ಚಿಂತಕರ ನಾಡು ಎಂದು ಕರೆದಿರುವದುಂಟು. ಲೇಖಕರು ಪ್ರಶ್ನೆ ಮಾಡುತ್ತಾರೆ, ಇದು ಸಿನೇಮಾಮಂದಿಗೆ ಜೀವನದಿ ಯಾಕಾಗುವದಿಲ್ಲ ಎಂದು. ಇಂತಹ ಪುಣ್ಯನೆಲದಲ್ಲಿ ಆಗಿಹೋದ ಸಂತರ, ದಾರ್ಶನಿಕರನ್ನು ಪಟ್ಟಿಮಾಡಿ ಹೇಳುವ ಲೇಖಕನಿಗೆ ಬಹಳಷ್ಟು ಕಾಡಿದೆ. ಸ್ವಚ್ಚ ಭಾರತವೆಂದರೆ ಲೇಖನವು ಇದೇ ಜಾಡಿನಲ್ಲಿ ಅರಳಿದಂತಹುದು. ಹೀಗೆ ಈ ಭಾಗದ ಎಲ್ಲ ಲೇಖನಗಳು ತೀವೃತರಹದ ಚಚರ್ೆಗೆ ಗ್ರಾಸವಾಗುವಂತಹುಗಳು. 

       ಮೂರನೇ ಕಂತಿನಲ್ಲಿ ವ್ಯಕ್ತಿಪ್ರಧಾನ ಆಶಯವುಳ್ಳ ಲೇಖನಗಳ ಸೂಡು ಕಟ್ಟಿಕೊಟ್ಟಿದ್ದಾರೆ. ಪ್ರೀತಿಸುವ ಗುಣದ, ಸಾಂಸ್ಕೃತಿಕ ರಾಯಭಾರಿಗಳ ಪರಿಚಯ ಇಲ್ಲಿ ಸಿಗುತ್ತದೆ. ತನ್ನ ಅವ್ವ ನಿಂಗಮ್ಮಳ ಕುರಿತಾದ ಬರಹ, ಕುಲಕರ್ಣಿ ಭೀಮರಾವ, ಖ್ಯಾತ ನಾಟಕಕಾರ ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕೃತ ಎಲ್.ಬಿ.ಕೆ.ಅಲ್ದಾಳ ರ ಕುರಿತಾದ ತುಂಬಿದ ಕೊಡ, ಲಿಂಗಣ್ಣ ಸತ್ಯಂ ಪೇಟೆ, ವೃತ್ತಿ ರಂಗಭೂಮಿಯ  ಜೇವರ್ಗಿ ರಾಜಣ್ಣ, ಬಸವರಾಜ ಸಗರ ಮೊದಲಾದವರನ್ನು ಪರಿಚಯಿಸುವ ಜೊತೆಯಲ್ಲಿ ಅವರ ಕ್ಷೇತ್ರವನ್ನು ತುಂಬಾ ಸೂಕ್ಷ್ಮವಾಗಿ ಗ್ರಹಿಸಿಕೊಂಡು ಅನುಭವದ ಮೊಸೆಯಲ್ಲಿ ಓದುಗರಿಗೆ ನೀಡಿದ್ದಾರೆ. ದಾವಲಸಾಬ ಮತ್ತು ಸಾರಂಗ ಹಿಂದೂ-ಮುಸ್ಲಿಂರ ಅನೋನ್ಯ ಬದುಕಿನ ಅನಾವರಣವಾಗಿದೆ ದಾವಲಸಾಬ ದಣಿವರಿಯದ ಹಾಡುಗಾರಿಕೆ, ಪ್ರಾಣಿ ಸಂಕುಲದೊಂದಿಗೆ ಅವನ ಅಪರಿಮಿತ ಪ್ರೀತಿ, ಭೀಕರ ಕ್ಷಾಮದಲ್ಲಿಯೂ ಸಾಯುವ ಕೊನೆಕ್ಷಣವೂ ಅಂಟಿಕೊಂಡೇ ಸಾರಂಗ ಮತ್ತು ಶ್ರೀಮಂತ ಇದ್ದು ರೋಧಿಸುತ್ತದ್ದ ಘಟನೆ ಓದಿದೊಡನೆ ಹೃದಯ ಹಿಂಡಿ ಬದುಕು ಭಾರವಾಗುತ್ತದೆ. ಇಂತಹುದೇ ಜೀವಪ್ರೀತಿಯ ಭಾವಸ್ಪುರಣದ ಕಥನ ಕುಂಬಾರ ಮಲಕವ್ವ ಮತ್ತು ಕಾಶೀಮನ ಕ್ರಾಂತಿ ಲೇಖನದಲ್ಲಿ ಕಂಡು ಬರುತ್ತದೆ. ಕೊನೆಯದಾಗಿ ಅಪ್ಪನ ಕುರಿತಾದ ಬರಹ  'ಧರೆಯ  ಭೋಗವ ನೀಗಿ'. ಹೀಗೆ ಇಲ್ಲಿನ ಎಲ್ಲ ಬರಹಗಳು ಸಾಂಸ್ಕೃತಿಕ ಕ್ಷೇತ್ರವನ್ನು ಪ್ರತಿನಿಧಿಸುವಂತಹವು, ಎಲ್ಲರಿಗೂ ಮಾದರಿಯಾಗಿ ಬಾಳಿದವರು, ಅಂತವರ ನೆನಹುದೇ ಒಂದು ಸಂಭ್ರಮ.

    ಕೊನೆಯ ಭಾಗದಲ್ಲಿನ ಆರು ಲೇಖನಗಳು ಬಹಳ ವಿಸ್ತೃತವಾದ ವಿಷಯವನ್ನು ಪ್ರಸ್ತಾಪಿಸುವದಕ್ಕೆ ಮೀಸಲಿಟ್ಟಿದ್ದಾರೆ. ವ್ಯಕ್ತಿಕೇಂದ್ರೀತ ಮತ್ತು ಜೀವಕೇಂದ್ರಿತ ಪರಧಿಯಾಚೆಗಿನ ಸಮೂಹ ಸೃಷ್ಠಿಯ ಕುರಿತಾಗಿಗ ಚಿಂತನೆಗಳು ಇವು. ಜಾನಪದದ ಹಂತಿ ಇಂದು ಮರೆಯಾಗುತ್ತಿರುವ ಕಾವ್ಯಮಾಧ್ಯಮ, ವಿಮರ್ಶೆಯ ಅಳತೆಗೋಲಿನಲ್ಲಿ ಇಲ್ಲಿನ ಬರಹಗಳು ತಾಗಿಕೊಂಡಿವೆ. ಹಂತಿ ಕಣ್ಮರೆಯಾದ ಜನಸಂಸ್ಕೃತಿ, ಚಾರಿತ್ರಿಕ ಅಸ್ಮಿತೆಯ ಹುಡುಕಾಟದಲಿ ಎಂಬೆರಡು ಮಹತ್ವದ ಲೇಖನಗಳು ಇಲ್ಲಿ ಸ್ಥಾನಪಡೆದು ಕೃತಿಯ ಮೆರಗು ಹೆಚ್ಚು ಮಾಡಿವೆ ಎಂದರೆ ತಪ್ಪಿಲ್ಲ. ಇಲ್ಲಿನ ಎಲ್ಲ ಬರಹಗಳು ಓದುಗನಿಗೆ ತಂತಾನೆ ಓದಿಸಿಕೊಂಡು ಹೋಗುವ ಗುಣವಿದೆ. ಡಾ. ಮೀನಾಕ್ಷಿ ಬಾಳಿ ಅವರ ಬೆನ್ನುಡಿಯಲ್ಲಿ ಹೇಳಿದಂತೆ ಹೇಳದೇ ಬಿಟ್ಟದ್ದು ಇನ್ನೂ ಬಹಳಷ್ಟಿದೆ. ಯಡ್ರಾಮಿ ನೆಲದ ಇಂತಹ ಕಥನಗಳು ಮಲ್ಲಿಕಾರ್ಜುನ ಕಡಕೋಳರ ಶಾಹಿಯಿಂದ ಇನ್ನಷ್ಟು ಬರಲಿ ಎಂಬುದೆ ನಮ್ಮ ಆಶಯ. ಕಡಕೋಳ ಊರಿನವರಾದ ಮಲ್ಲಿಕಾರ್ಜುನರಿಗೆ ಮಡಿವಾಳಪ್ಪನವರ ತತ್ವಪದಗಳ ದಾಷ್ಠ್ಯವನ್ನು ಸರಿಯಾಗಿ ಹೇಳಬಲ್ಲ ಶಕ್ತಿ ಇದೆ ಎಂಬದುದನ್ನೂ ಹಿರಿಯ ಕವಿ, ಸಾಂಸ್ಕೃತಿಕ ಚಿಂತಕ ಡಾ. ಎಲ್.ಎನ್. ಮುಕುಂದರಾಜ್ ಅವರ ಮಾತುಗಳಲ್ಲೇ ನೋಡಬೇಕು. ಎಲ್ಲ ಮೂವ್ವತ್ತೆಂಟು ಲೇಖನಗಳು ಬಹಳ ಪ್ರೀತಿಯಿಂದ ಓದಿಸಿಕೊಂಡು ಹೋದವು. ಯಡ್ರಾಮಿಗೆ ಆಗಾಗಾ ಹೋಗುವ ನಾನು (ನನ್ನಾಕೆಯ ತವರುಮನೆ ಯಡ್ರಾಮಿ) ಈ ಕೃತಿ ಓದಿದ ಮೇಲೆ ಇಲ್ಲಿ ಪ್ರಸ್ತಾಪಿಸಿದ ಸಂಗತಿಗಳ ಮೆಲಕು ಹಾಕುತ್ತಲೇ ಹೊಸಭಾವದೊಂದಿಗೆ ಯಡ್ರಾಮಿ ನೋಡಿಕೊಂಡು ಬಂದೆ, 'ಯಡ್ರಾಮಿ ಸೀಮೆಯ ಕಥನಗಳು' ಓದುವದಕ್ಕಾಗಿಯೇ ಕೊಂಡು ತಂದ ಈ ಕೃತಿ ಮನಸ್ಸಿಗೆ ಬಹಳ ಸಮಾಧಾನ ನೀಡಿತು. ಶ್ರೀಯುತ ಮಲ್ಲಿಕಾರ್ಜುನ ಕಡಕೋಳರಿಗೆ ಧನ್ಯವಾದಗಳನ್ನು ಸಲ್ಲಿಸುತ್ತ ಅವರೊಟ್ಟಿಗೆ ಯಡ್ರಾಮಿ ಸೀಮೆಯ ಪರಿಸರ ಒಂದು ಭಾರಿ ಸುತ್ತಬೇಕು ಅಲ್ಲಿನ ಸಂಗತಿಗಳನ್ನು ಅವರ ಬಾಯಿಯಿಂದಲೇ ಮತ್ತೊಮ್ಮೆ ಆಸ್ವಾದಿಸಬೇಕು ಎಂಬ ಹಂಬಲದೊಂದಿಗೆ

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಮೇಶ ಎಸ್. ಕತ್ತಿ