ನಾನು ಇತ್ತಿಚೆಗೆ ಓದಿದ ಕಥಾಸಂಕಲನ ಹನುಮಂತ ಹಾಲಿಗೇರಿ ಅವರ "ಮಠದ ಹೋರಿ" ಇಲ್ಲಿ ಸುಮಾರು ಹತ್ತೊಂಬತ್ತು ಕತೆಗಳು ಇದ್ದು, ಪ್ರತಿ ಕತೆಯೂ ಒಂದೊಂದು ಸಮಸ್ಯೆಯ ಜೊತೆಗೆ ಪಯಣ ಬೆಳೆಸುತ್ತವೆ..ಈ ಎಲ್ಲಾ ಕತೆಗಳಲ್ಲಿ ಸನಾತನದಿಂದ ವಿನೂತದೆಡೆಗಿನ ಪಯಣ, ಜಾಗತೀಕರಣ, ಹಾದರ, ಸ್ನೇಹ, ಪ್ರೀತಿ, ಗೌಡಕಿಯ ದರ್ಪ, ಜನಪದರ ನಂಬಿಕೆಗಳು, ಈ ಥರಹದ ಅನೇಕ ಸಂಗತಿಗಳು ನಮ್ಮ ಕಾಲಕ್ಕೆ ಮುಖಾ ಮುಖಿ ಆಗುವ ಅನೇಕ ಸಂಗತಿಗಳು ಇಲ್ಲಿ ಚಿತ್ರಣಗೊಂಡಿದ್ದಾವೆ. 'ಮೂಕ ದ್ಯಾವ್ರು', 'ಮಠದ ಹೋರಿ' ಈ ಎರಡೂ ಕತೆಗಳು ಇಡೀ ಕಥಾಸಂಕಲನದ ಮೆರುಗು ಹೆಚ್ಚಿಸಿದ್ದಾವೆ..ಮೊದಲ ಕತೆಯಲ್ಲಿ ಆಕಳು ಮತ್ತು ಹೋರಿ ರೂಪಕವಾಗಿ ತಂದು ಅಂತರ್ಜಾತಿಯ ವಿವಾಹವಾಗುವುದು ಇಲ್ಲಿ ಕಂಡುಬರುತ್ತದೆ..'ಮಠದ ಹೋರಿ' ಕತೆ ಓದಿ ಅವಾಕ್ಕಾದೆ! ಯಾಕೆಂದ್ರೆ ನಿರೂಪಕರು ಆಕಳಾಗಿ, ಹೋರಿಯಾಗಿ, ಎಮ್ಮೆಯಾಗಿ ಅಭಿವ್ಯಕ್ತಿಸುವುದಿದೆಯಲ್ಲಾ ಅದು ಎಂಥವರನ್ನೂ ಬೆರಗು ಗೊಳಿಸುತ್ತದೆ..ಇಲ್ಲಿ ಹೋರಿಯ ಮಾತನ್ನು ಪ್ರಸ್ತಾಪಿಸುವುದಾದರೆ, "ಮಾನವರ ಮಕ್ಕಳನ್ನು ನೋಡಿದ ಮೇಲೆ ಮಠದಲ್ಲಿದ್ದ ನನ್ನ ಮಕ್ಕಳು ನೆನಪಿಗೆ ಬರತೊಡಗಿದರು"..ಈ ಮಾತು ಹೋರಿಗಷ್ಟೇ ನಿಲ್ಲುವುದಿಲ್ಲ.. ಬಾಯಿದ್ದೂ ಮೂಕವಾಗಿ ಅವಜ್ಞೆಗೆ ಒಳಗಾದ ಅನೇಕ ಸಮುದಾಯಗಳ ಪ್ರತಿನಿಧಿಯಾಗಿ ಸಾಗುತ್ತದೆ..
'ಕೇರಿಗಾಯಕ್ಕೆ ಕೆಂಡದ ಮುಲಾಮು' 'ಕಾಂಕ್ರೀಟ್ ಮೊಟ್ಟೆಗಳು' 'ಬೆಂಕಿ ಉಗುಳುವ ಪಂಕಾ' ಈ ಥರಹದ ಕತೆಗಳು ಸ್ವಾತಂತ್ರ್ಯ ಮತ್ತು ಗಣರಾಜ್ಯವಾದ ನಂತರ ಕಾಲದ ಜೊತೆಗೆ ಮುಖಾಮುಖಿ ಆಗುತ್ತವೆ...ಚನ್ನಪ್ಪ, ಯಮುನ್ಯಾ, ಉಪ್ಪಾರ ಭೀಮಣ್ಣ, ಸೈಯದ್ ಪಾತ್ರಗಳಲ್ಲಿನ ಒಡಂಬಡಿಕೆ ಮತ್ತು ಒತ್ತಾಯ ಎರಡೂ ರೀತಿಯ ಸಂಗತಿಗಳು ಕಂಡುಬರುತ್ತವೆ.. ಒತ್ತಾಯಕ್ಕೆ ಚೆನ್ನಪ್ಪ ನಂಥ ಪಾತ್ರಗಳು ಕುಣಿದರೆ, ಒಡಂಬಡಿಕೆಗೆ ಕಂಪನಿಗಳ ಸೆಕ್ಯೂರಿಟಿ ಕೆಲಸಕ್ಕೆ ಅಣಿಯಾಗುವ ಉಪ್ಪಾರ ಭೀಮಣ್ಣ ನಂಥ ಪಾತ್ರಗಳು ಒಲ್ಲದ ಮನಸ್ಸಿಂದ ಒಡಂಬಡಿಕೆ ಗೊಳ್ಳುತ್ತವೆ.. ಇಂದು ನಮ್ಮ ಪ್ರಭುತ್ವ ಕಾಶ್ಮೀರವನ್ನು ಭಾರತದೊಂದಿಗೆ ವಿಲಿನೀಕರಣ ಮಾಡಿದ್ದಕ್ಕೆ ಬೇರೆ ಥರದಹದ ಕಾರಣಗಳು ಕೊಡಬಹುದು, ಆದರೆ ಕಾಶ್ಮಿರದ ಜನ ತಮ್ಮ ಪರಿಸರಕ್ಕೆ ಅನುಗುಣವಾಗಿ 'ಕೇಸರಿ, ಸೇಬು' ಬೆಳೆದು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ..ಈಗ ಒಡಂಬಡಿಕೆ ಆಗಿರುವುದರಿಂದ ಉದ್ಯಮಿಗಳು ಅಲ್ಲಿಯ ಸಹಜ ಬೆಳೆಗಳನ್ನು ನಾಶ ಮಾಡಿ ದೊಡ್ಡ ದೊಡ್ಡ ಕಂಪನಿಗಳನ್ನು ತೆಗೆದು ಅಲ್ಲಿಯ ಜನರಿಗೆ ಸೂಟು ಬೂಟು ತೊಡಿಸಿ ಕಂಪನಿಯ ಮ್ಯಾನಿಜರ್ರೋ, ಸೆಕ್ಯೂರಿಟಿಯೋ ಆಗಿಸಿ ಮತ್ತೆ ಅವರನ್ನು ಫ್ಯೂಡಲ್ ಒಳಗೆ ನೂಕುವುದನ್ನು ಈ ಕತೆಗಳು ಎಚ್ಚರಿಸುತ್ತವೆ....
'ಭಾಗವ್ವ' ಎನ್ನುವ ಕತೆಯಲ್ಲಿ ಅಸಹಾಯಕ ಮೂಕಪ್ಪ "ಒಮ್ಮೊಮ್ಮೆ ಹಿತ್ತಲಿನಲ್ಲಿ ಕಟ್ಟಿದ್ದ ತನ್ನ ಎತ್ತುಗಳನ್ನು ವಿನಾಕಾರಣ ಕಟ್ಟಿ ಬಡಿಯುತಿದ್ದನಂತೆ" ಈ ಕತೆ ಮತ್ತೆ ನಮಗೆ ಕಾರಂತರ ಚೋಮನನ್ನು ನೆನಪಿಸುತ್ತದೆ..ಹೊಟ್ಟ್ಯಾನ ಸಗತಿ, ರಟ್ಟ್ಯಾಗಿಲ್ಲದ ಎಷ್ಟೋ ಸಮುದಾಯಗಳು ತಮ್ಮನ್ನು ತಾವು ನೋಯಿಸಿಕೊಂಡು ಎದೆಬಾರ ಇಳಿಸಿಕೊಳ್ಳುವುದು ಮತ್ತು ಇಳಿಸಿಕೊಳ್ಳುತ್ತಿರುವುದು ಇವತ್ತಿಗೂ ಕಾಣುತ್ತೇವೆ....
'ಡೈರಿ ಹಾಲಿಗೆ ಹುಳಿ ಬಿತ್ತು', 'ಸಂವಿಧಾನ ಮತ್ತು ರಣಹದ್ದು', 'ಕತ್ತಲ ಗರ್ಭದ ಮಿಂಚು' ಈ ಮೂರೂ ಕತೆಗಳು ಹಳ್ಳಿಯಲ್ಲಿ ನಡೆಯುವ ಅನೇಕ ವಾಸ್ತವ ಘಟನೆಗಳು ಚಿತ್ರಣಗೊಂಡಿದ್ದಾವೆ..ಹಾಲಿನ ಡೈರಿಗಾಗಿ ತಳವಾರ ಮತ್ತು ಲಿಂಗಾಯತ ಸಮುದಾಯದ ನಡುವೆ ಜಗಳ ಮತ್ತು ಲಿಂಗಾಯತ ಸಮುದಾಯದ ಅಕ್ಕವ್ವಳನ್ನು ಪ್ರೇಮಿಸಿ ಓಡಿಸಿಕೊಂಡು ಹೋದದ್ದು... ಜಾಗತೀಕರಣವು ಸಮುದಾಯ ಸಮುದಾಯಗಳ ಮಧ್ಯೆ ಸಂಘರ್ಷವನ್ನು ತುಂಬಾ ಸಬೂಳಾಗಿ ಚಲಾವಣೆಗೆ ತರುವುದು ಇಲ್ಲಿ ಕಂಡುಬರುತ್ತದೆ... ಹಾಗೆಯೇ ರಾಜಕಾರಣಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಅನುಗುಣವಾಗಿ ಕೆಳವರ್ಗದ ಪ್ರತಿಭೆಗಳನ್ನು ಬಳಸಿಕೊಳ್ಳುವುದು 'ಭೀಮ್ಯಾ' ಎನ್ನುವ ಪಾತ್ರದ ಮುಖಾಂತರ ಕಟ್ಟಿಕೊಟ್ಟಿದ್ದಾರೆ...
'ಹಾದರ ಕಾಯಕದ ಪುಣ್ಯಶ್ರೀ', 'ಜ್ಞಾನದೊಳಗಿನ ಅಜ್ಞಾನದ ಕೇಡು ನೋಡಯ್ಯ', 'ಬಲಿ', ಈ ಮೂರೂ ಕತೆಗಳಲ್ಲಿ ಅವ್ವಕ್ಕ, ರತ್ನ ಈ ಹೆಣ್ಣುಗಳು ಪುರುಷ ತನಗೆ ಬೇಕಾದಂತೆ ಬಳಸಿಕೊಂಡು ಬಲಿಪಶು ಮಾಡಿರುವುದು ಎರಡು ಕತೆಗಳಲ್ಲಿ ಚಿತ್ರಣಗೊಂಡರೆ, 'ಬಲಿ' ಎನ್ನುವ ಕತೆಯಲ್ಲಿ ಹನುಮ್ಯಾನ ಮುಖಾಂತರ ಈಗಾಗಲೇ ರೂಪಿತವಾದ ಚರಿತ್ರೆಯನ್ನು ಮುರಿಯುವುದು ಕಂಡು ಬರುತ್ತದೆ...
'ಗೆಲುವೆನೆಂಬುದು ಸೋಲದ ಮಾತು', 'ಸಕಲರೊಳು ಲಿಂಗಾತ್ಮ ಕಾಣಾ' ಈ ಎರಡೂ ಕತೆಗಳು ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕೋದ್ಯಮ ತನಗಿರಬೇಕಾದ ಜವಬ್ದಾರಿಯ ಕುರಿತು ಮಾತಾಡುವುದರ ಜೊತೆಗೆ ತಾನು ಹಿಡಿದಿರುವ ವಾಮಮಾರ್ಗವನ್ನೂ ಅನಾವರಣಗೊಳ್ಳುತ್ತವೆ. ಇರುವುದನ್ನು ಇಲ್ಲವಾಗಿಸುವ, ಇಲ್ಲವಾಗಿರುವುದನ್ನು ಇರುವಿಕೆ ಗೊಳಿಸುವ, ಅಥವಾ ಸಣ್ಣ ಇರುವಿಕೆಯನ್ನು ತನ್ನ ಏಳಿಗೆಗಾಗಿ ವೈಭವೀಕರಿಸುವ ಮತ್ತು ತುಚ್ಛವಾಗಿ ಕಡೆಗಾಣಿಸುವಂಥ ಬೇಜವಾಬ್ದಾರಿತನವನ್ನು ಕಟ್ಟಿಕೊಟ್ಟಿದ್ದಾರೆ... ಫಲಿತಾಂಶ ಎನ್ನುವ ಇನ್ನೊಂದು ಕತೆಯಲ್ಲಿ ರಾಜಕಾರಣ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ಚಿತ್ರಣಗೊಂಡಿದೆ... ಇಂದು ವೈಯಕ್ತಿಕ ಗೌರವವನ್ನು ಉಳಿಸಿಕೊಳ್ಳದೇ ವ್ಯಕ್ತಿಯ ಖಾಸಗೀ ಸಂಗತಿಗಳನ್ನು ರಾಜಕಾರಣದಲ್ಲಿ ತಂದು ವ್ಯಕ್ತಿ ವ್ಯಕ್ತಿಗಳ ನಡುವೆ ತೇಜೋವಧೆಗೊಳಿಸುವ ನಮ್ಮ ಕಾಲಕ್ಕೆ ಈ ಕತೆ ಅನುಸಂಧಾನಗೊಳ್ಳುತ್ತದೆ...
'ಮೋಹರಂ ಹಬ್ಬ' ಎನ್ನುವ ಇನ್ನೊಂದು ಕತೆಯಲ್ಲಿ ಅತಿ ಹೆಚ್ಚು ಬೆಳಗಿನ ಬಗ್ಗೆ ನಿರೂಪಣೆ ಗೊಂಡಿದೆ.. ಉದಾಹರಣೆಗೆ ನೋಡ್ತು ಅಂದ್ರೆ
೧."ಸೂರ್ಯ ಭುಜದ ನೇರಕ್ಕೆ ಬಂದಿರಲಿಲ್ಲ"
೨."ಅವತ್ತು ಸೂರ್ಯ, ಸಂಭವಿಸಲಿರುವ ಅನಾಹುತಕ್ಕೆ ಹೆದರಿ ನೆತ್ತಿಯಿಂದ ಪಶ್ಚಿಮಕ್ಕೆ ಇಳಿಯಲೋ ಬೇಡವೋ ಎಂಬಂತೆ ಇಳಿಯುತ್ತಿದ್ದ"
೩."ಸಂಜೆಯ ಸೂರ್ಯ ಆಗಿನ್ನು ನೆತ್ತಿಯಿಂದ ಕೆಳಗಿಳಿದಿರಲಿಲ್ಲ"
೪."ಸೂರ್ಯ ಪಡುವಣದ ಕೆಂಧೂಳಿಯಲ್ಲಿ ಮರೆಯಾಗುತ್ತಿದ್ದ"
ಈ ಥರಹದ ಬೆಳಕಿನ ಮತ್ತು ಇಳಿಹೊತ್ತಿನ ವರ್ಣನೆಗಳು ಬಂದು ಹೋಗುತ್ತವೆ...ಮೋಹರಂ ಎಂದರೆ ಅದು ಕತ್ತಲ ರಾತ್ರಿಯೊಳಗೆ ಘಟಿಸುವಂಥಾದ್ದು, ಆದರಿಲ್ಲಿ ಎಲ್ಲಾ ಸಂಗತಿಗಳೂ ಬೆಳಕಿನಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತವೆ... ಕತ್ತಲನ್ನು ಹಿಡಿದಿಡುವಲ್ಲಿ ಈ ಕತೆ ಶಿಥಿಲಗೊಂಡಿದೆ ಎಂದನಿಸದೆ ಇರದು....
ಒಟ್ಟಿನಲ್ಲಿ ಈ ಕಥಾ ಸಂಕಲನದಲ್ಲಿ, ಕೆಲವು ಕತೆಗಳು ಸಹಜತೆಯೊಂದಿಗೆ ಪಯಣ ಬೆಳೆಸಿ ಅನೇಕ ಸಂಗತಿಗಳು ಘಟಿಸುತ್ತವೆ..ಇನ್ನೂ ಕೆಲ ಕತೆಗಳು ಸಮಸ್ಯೆಗಳೊಂದಿಗೆ ಪಯಣ ಬೆಳೆಸಿ,ವರದಿ ರೂಪದಲ್ಲಿ ಸಂಗ್ರಹಗೊಳ್ಳುತ್ತವೆ.. ಕತೆಗಳಲ್ಲಿ ಬಳಸಿಕೊಂಡಿರುವ ಭಾಷೆ ಬೆರಗು ಗೊಳಿಸುವುಂಥಾದ್ದು...ನಿರೂಪಕರ ತಾಯ್ನುಡಿಯಲ್ಲಿಯೇ ಅನೇಕ ಕತೆಗಳು ನಿರೂಪಣೆಗೊಂಡಿದ್ದಾವೆ..ಕತೆಗಳಿಗೆ ಬಹುಮುಖ್ಯವಾಗಿ ಬೇಕಾಗಿರುವ ಅನೇಕ ಪ್ರಕಾರಗಳಲ್ಲಿ ಭಾಷೆ ಮೇಲಸ್ಥರದ್ದಾಗಿರುತ್ತದೆ.. ಅದನ್ನು ಚೆನ್ನಾಗಿಯೇ ದುಡಿಸಿಕೊಂಡಿದ್ದಾರೆ..ಈ ಮಠದ ಹೊರಿ ನಮ್ಮೊಳಗೊಂದು ಮರಿ ಹುಟ್ಟಿಸಿದೇ ಇರದು..