Article

ಜೀವನ ಪ್ರೀತಿಯ ‘ವರ್ಜಿನ್ ಮೊಜಿತೊ’

ಹಿರಿಯ ಪತ್ರಕರ್ತರಾದ ಸತೀಶ್ ಚಪ್ಪರಿಕೆ ಅವರ ಎರಡನೆಯ ಕತಾಸಂಕಲನ "ವರ್ಜಿನ್ ಮೋಹಿತೋಏಳು ಭಿನ್ನ ಹೂರಣವುಳ್ಳ ಓಘಪೂರ್ಣವಾದ ಕತಾಗುಚ್ಛ. ಮುಖಪುಟ ವಿನ್ಯಾಸ (ಸತ್ಯಕುಮಾರಿ)ವನ್ನು ಪುಸ್ತಕ ಓದಿದ ಮೇಲೆ ನೋಡಿದಾಗ ಕತೆಗಳ ಹಿಂದಿರುವ ಗಾಢ ಬಣ್ಣಗಳು, ಮನಸ್ಸಿನ ತುಮುಲ ಆಂದೋಲನಗಳನ್ನೇ ಚಿತ್ರಿಸಿರುವಂತೆ ಇದೆ. ಆಕರ್ಷಣೀಯ ಮತ್ತು ಔಚಿತ್ಯಪೂರ್ಣ ಮುಖಪುಟ ವಿನ್ಯಾಸ.

ಸೃಜನಶೀಲ ತಂತ್ರಗಳಿಂದ ಕೂಡಿದ ಕತೆಗಳ ತೋರಣ ಇಲ್ಲಿದೆ. ವಾಕ್ಯ ಸರಣಿಗಳು ಸುಲಲಿತ. ಅತ್ಯಂತ ವೇಗವಾಗಿ ಓದಿಸಿಕೊಂಡ ಪುಸ್ತಕಗಳಲ್ಲಿ ಇದೂ ಒಂದು.

ಪುಸ್ತಕ ಓದಿ ಮುಗಿಸಿದ ಮೇಲೆ ಹುಟ್ಟಿದ ಭಾವ "ಪ್ರೀತಿ". ಜೀವನ-ಪ್ರೀತಿ.

ಬೊಂಬಾಯಿ ಪೆಟ್ಟಿಗೆ

ಎರಡು ಪಲಾಯನಗಳ ಮನಸ್ಥಿತಿಯ ಮಧ್ಯ ನಡೆಯುವ ಕತೆ ಇದು. ಮಾರಿಕಾಂಬಾ ಜಾತ್ರೆಯ ಸಂದರ್ಭ ತನ್ನ ತಂಗಿ ರೇವತಿಯ ಜತೆ ಬೊಂಬಾಯಿ ಪೆಟ್ಟಿಗೆಯ ಜಗತ್ತನ್ನು ನೋಡುತ್ತಾ ಇದ್ದ ಸದಾನಂದನಿಂದ ತಪ್ಪಿಹೋದ ತಂಗಿ ರೇವತಿ- ಮತ್ತಿನ, ಕತೆಗಾರರೇ ಹೇಳುವ ' ಸ್ಥಬ್ಧ ಜಗತ್ತು' ಇದರಿಂದ ಮನಸ್ಸು ಬಯಸುವ ಪಲಾಯನ ಸದಾನಂದನನ್ನು ಬೆಂಗಳೂರಿಗೆ ಕರೆತಂದದ್ದು; ಬೆಂಗಳೂರಿನ ವೇಗದ ಮಾತ್ರವಲ್ಲ ಆವೇಗದ ಜಗತ್ತಿನಿಂದ ತಪ್ಪಿಸಿಕೊಂಡು ಹೋಗಿ ಮರಳಿ ಶಾಂತ ಸ್ಥಬ್ಧತೆಯೆಡೆಗೇ ಹೋಗಲು ಬಯಸುವ ಸದಾನಂದನ ಪಯಣವೇ ಕತೆಯ ಕೇಂದ್ರ. ಕತೆಯ ಸೌಂದರ್ಯವಿರುವುದು ತನ್ನ ಮೈಮರೆವಿನಿಂದಾಗಿ ಮುಂಬಯಿ ಪೆಟ್ಟಿಗೆ ಒಳಗೆ ಕಾಣುತ್ತಿದ್ದ ಮಾದಕ ಮುಂಬಯಿಯ ದೃಶ್ಯವನ್ನು ನೋಡುತ್ತಿದ್ದಾಗ ಕೈತಪ್ಪಿದ ತಂಗಿ ರೇವತಿ ಒಂದು ಭಾಗವಾದರೆ; ತಂದೆ ತಾಯಿಯರ ಕೈತಪ್ಪಿ ಸದಾನಂದನ ಒಳಗಿನ ಪತ್ರಕರ್ತನ ಜಾಣ್ಮೆಯಿಂದ ಮಗು ಸುರಭಿಯನ್ನು ಮತ್ತೆ ಅವಳ ತಂದೆ ತಾಯಿಯ ಕೈ ಸೇರಿಸುವ ಕ್ರಿಯೆ ಕತೆಯ ಮತ್ತೊಂಬು ತುದಿ. ರೇವತಿಯಿಂದಾಗಿ ಪಟ್ಟಣ ಸೇರಿದ ಸದಾನಂದ, ಸುರಭಿಯಿಂದಾಗಿ ಪಟ್ಟಣ ತೊರೆಯುತ್ತಾನೆ. ಇದು ಕತೆಯ ತಂತ್ರ ಸೌಂದರ್ಯ ಅಥವಾ ಪುಷ್ಟಿ ಹೊಂದಿದ ಕಥಾ ಶಿಲ್ಪ. ಸುಂದರವಾದ ತೋರಣದ ನಡುವಿನ ಹೂರಣದಲ್ಲಿ ಮೌಲ್ಯಗಳಾದ ಕರುಣೆ, ವಾತ್ಸಲ್ಯ, ತಾತ್ವಿಕ ತಾಕಲಾಟಗಳು, ತಾಕಲಾಟಗಳಿಂದ ತಪ್ಪಿಸಿಕೊಳ್ಳಲು ತೊಡಗುವುದು, ಪತ್ರಕರ್ತರ ಜೀವನದಲ್ಲಿನ ಅಭದ್ರತೆ ಅತಂತ್ರ ಸ್ಥಿತಿ ಇವೆಲ್ಲಾ ಗಾಢವಾಗಿ ಮೂಡಿವೆ.

ಹೈಡ್ ಪಾರ್ಕ್

ಕಥೆ ವಂದನಳ ಮಗ ಚಿರು ತನ್ನ ಪಿಹೆಚ್ಡಿ ಗೈಡ್ ಹದಿನೈದು ವರುಷ ಹಿರಿಯಳಾದ ಡೈವೋರ್ಸಿ ಜೂಲಿಯಾಳನ್ನು ವರಿಸುವ ಕಥಾಹಂದರ ಹೊಂದಿದೆ. ಕಾವ್ಯಾತ್ಮಕತೆ ಇದೆ ಕಥನಶೈಲಿಗೆ. ರೂಪಕಗಳ ಬಳಕೆ ಕತೆಯ ಕಾವ್ಯಾತ್ಮತೆಗೆ ಕಾರಣ. 'ಸರ್ಪೆಂಟೈನ್ ನದಿ' ಮತ್ತು 'ಹೈಡ್ ಪಾರ್ಕ್' ಇವೆರಡು ರೂಪಕಗಳು. ಸರ್ಪದಂತೆ ಹರಿವ ನದಿ ಮತ್ತು ಹೈಡ್ ಪಾರ್ಕ್. ಮೊದಲನೆಯದು ಕಾಮಕ್ಕೆ ಸಂಕೇತವಾದರೆ ( ಸರ್ಪ) ಮತ್ತೊಂದು ಶಾಂತಿ, ವಿಶ್ರಾಂತ ಸ್ಥಿತಿಗೆ ಸಂಕೇತ. ಜೂಲಿಯಾ ಮತ್ತು ಚಿರು ಇಬ್ಬರೂ ಜೀವನದಲ್ಲಿ ಸೆಟ್ಲ್ ಆಗಲು ತೊಡಗಿಸಿಕೊಂಡವರು. ಆದರೆ ವಂದನ ಮಾತ್ರ ಅತಂತ್ರಳಾಗಿಯೇ ಇದ್ದವಳು.

' ಚಾಚಿದ್ದ ಸಂಜೆಯ ಇಳಿ ಬಿಸಿಲ ಚಾಮರ' ಇಂತಹ ವಾಕ್ಯಗಳು ಹಿಡಿದಿಡುತ್ತದೆ.ಕಾಮ ಮತ್ತು ಶಮ ಇವೆರಡರ ಮಧ್ಯದಲ್ಲಿ ಜೀವದ ಸಾಗುವಿಕೆಯ ಕಥನವೇ ಇಲ್ಲಿದೆ. ನದಿಗೆ ಜೀವನ ಎಂದೆನ್ನುತ್ತಾರೆ. ಸರ್ಪ ಕಾಮಕ್ಕೆ ಪ್ರತೀಕ. ಸರ್ಪದ ಚಲನದಂತಿರುವ ನದಿ - ಕಾಮವೇ ಪ್ರಧಾನವಾಗಿರುವ ಜೀವನದಿಂದ ಹೊರಬರಲು ಉಜ್ಜುಗಿಸಿ ಅಡಗಿರುವ ಉದ್ಯಾನದಲ್ಲಿ ( ನಮ್ಮ ಮನಸ್ಸಿನಲ್ಲಿ ಅಡಗಿರುವ ಸುಂದರ ಉದ್ಯಾನದಲ್ಲಿ) ನೆಲೆನಿಲ್ಲಲು ಕಾತರಿಸುವ ಜೀವಗಳ ಕಥೆಯೇ " ಹೈಡ್ ಪಾರ್ಕ್".

ದಾಸ

ತೀವ್ರವಾದ ಭಾವಲೋಕಕ್ಕೆ ಕರೆದುಕೊಳ್ಳುವ ಭೌತಿಕ ಸ್ತರದಿಂದ ಕೊಂಚ ಮೇಲ್ಮಟ್ಟಕ್ಕೆ ನಮ್ಮನ್ಬು ಸೆಳೆಯುವ ' ದಾಸ' ನೆಂಬ ನಾಯಿಯ ಸುತ್ತ ಕಟ್ಟಿದ ಪ್ರಾಯಶಃ ಲೇಖಕರಿಗಾದ ಜೀವನದ ಅನುಭವದ ಕಥನವಿದು. ಕಥೆಯ ಭಾಗಶಃ ನಾನೂ ಅನುಭವಿಸಿದ್ದೇ. ಹೋಟೇಲು ವ್ಯವಹಾರ, ಕ್ಲೀನಿಂಗ್, ಒಂದು ಕೈಯ್ಯಲ್ಲಿ ಚಾಕಚಕ್ಯತೆಯಿಂದ ಮೂರ್ನಾಲಕ್ಕು ಚಹಾ ಗ್ಲಾಸನ್ನು ಹಿಡಿಯುವ ಸಪ್ಲಾಯ್, ಕ್ಯಾಶರ್ ಕೆಲಸ, ಹಿಂದೆ ಇದ್ದ ಚಾದ ಪುಂಟೆಯಿಂದ ಮಾಡುವ ಚಹಾ, ಜತೆಗೆ ಆಟದಲ್ಲಿ ಇಡುವ ಹೋಟೆಲ್ -ಒಮ್ಮೆ ನನ್ನ ಬಾಲ್ಯಕ್ಕೂ ಕರೆದುಕೊಂಡು ಹೋಯಿತು. ನಾಯಿ ಎಂಬ ಸಮಾಜ ಜೀವಿಗಳಲ್ಲಿರುವ ಮೆಟಾಫಿಸಿಕಲ್ ಸಂಗತಿಗಳು ತುಂಬಾ ಆಪ್ತವಾಗಿಬಿಡುತ್ತೆ ಇಲ್ಲಿ. ಉಳಿದ ಕಥೆಗಳಂತೆ ಓಘವೂ ಇದೆ.

ಗರ್ಭ

"ನೀ ಸಮಾ ಉಂಡಿದ್ಯಾ ಮಗ" ಇದು ಕಥೆಯ ಕೇಂದ್ರ ಭಾವ- ಮಾತೃ ಹೃದಯ. ತಾನು ಗರ್ಭವನ್ನು ತೆಗೆಸಿಕೊಳ್ಳುವ ಸಂದರ್ಭದಲ್ಲಿದ್ದರೂ ತನ್ನ ಮಗನ ಕುರಿತಾಗಿ ಯೋಚಿಸುವ ಅಮ್ಮನ ಬಗೆಗೆ. ಭಾವ ನಮ್ಮೆಲ್ಲರ ಅಮ್ಮಂದಿರ ಮನಸ್ಸೇ ಹೌದು. ದೊಡ್ಡ ಕಾನ್ವಾಸ್ ನಲ್ಲಿ ಅನೇಕ ಭಾವಗಳನ್ನು ವರ್ಣಗಳಮೂಲಕ ಇಟ್ಟ ಚಿತ್ರದಂತಿದೆ. ಕೆಲವು ಗಾಢವಾಗಿ ಮನದಲ್ಲಿ ಪರಿಣಾಮ ಬೀರುತ್ತದೆ. ಕತೆ ನಮ್ಮಲ್ಲೇ ಅನೇಕ ಸಾಧ್ಯತೆಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ. ಅದು ಲೇಖಕನ ಗೆಲುವು.

ಮೂರುಮುಖಗಳು

ಮೂವರು ಸ್ನೇಹಿತರ- ಗ್ರೇಸಿ, ವಿಶು ಮತ್ತು ಮನು- ಬಿಡುಗಡೆಯ ಕತೆ. ತಮ್ಮೊಳಗಾಗುವ ಸೆಕ್ಶುವಲ್ ಹೆರಾಸ್ಮೆಂಟ್ ನಿಂದ ತಾವಾಗಿ ಬಿಡುಗಡೆಗೊಂಡು ನಿರಾಳವಾಗುವ ಕತೆ.

ವರ್ಜಿನ್ ಮೋಹಿತೋ

ಕೃಷ್ಣ ಪ್ರಕಾಶ ಉಳಿತ್ತಾಯ